ಹೊಸಪೇಟೆ: ತಾಲೂಕಿನ ವ್ಯಾಪ್ತಿಯಲ್ಲಿರುವ ಕಡುಬಡವರಿಗೆ ಸರ್ಕಾರದಿಂದ ನಿವೇಶನ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಶ್ರೀ ನಿಂಗರಾಜ್ ಗೌಡ್ರು ಬಣದ ಜಿಲ್ಲಾ ಸಮಿತಿಯಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕಿನಲ್ಲಿ ಸರ್ಕಾರಿ ನಿವೇಶನ ಸಾಕಷ್ಟಿದ್ದು, ಸರ್ಕಾರಿ ಜಮೀನುಗಳನ್ನು ಸಂರಕ್ಷಣೆ ಮಾಡಲು ಕಂದಾಯ ಇಲಾಖೆ ಮತ್ತು ನಗರಸಭೆ ವಿಫಲವಾಗಿವೆ. ಈ ಕುರಿತು ಅನೇಕ ವರ್ಷಗಳಿಂದ ಕರವೇ ಸಂಘಟನೆಯಿಂದ ಹೇಳುತ್ತ ಬರಲಾಗಿದ್ದರೂ ಇದುವರೆಗೂ ಪ್ರಯೋಜನವಾಗಿಲ್ಲ. ಸರ್ಕಾರಿ ಜಮೀನನ್ನು ನಕಲಿ ಮಾಲೀಕತ್ವವನ್ನು ಸೃಷ್ಟಿ ಮಾಡುತ್ತಿರುವ ಬಗ್ಗೆ ಮಾಹಿತಿ ಕೇಳಿ ಬರುತ್ತಿದ್ದು, ತಕ್ಷಣವೇ ಸರ್ಕಾರಿ ಜಮೀನನ್ನು ಪರಿಶೀಲಿಸಿ ಬಡವರಿಗೆ ನಿವೇಶನ ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಎಸ್. ಎಂ. ಜಾಫರ್, ಎನ್.ಎಚ್. ಶ್ರೀನಿವಾಸ, ಈಡಿಗರ ರಮೇಶ್, ಪ್ರಶಾಂತ್ ನಾಯಕ, ಸಲೀಂ, ನಿಸಾರ್, ರಾಮಕೃಷ್ಣ, ರಾಘವೇಂದ್ರರಾವ್, ರಾಘುರಾಮ್ ನಾಯಕ, ಸುವರ್ಣ ರತ್ನ, ಬಾನುಬಿ, ಶಮಾ, ನಾಗವೇಣಿ, ಸುಮಾ, ರಶೀದ, ದುರುಗಮ್ಮ, ಸುಂಕಮ್ಮ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.