ಹಾವೇರಿ: ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಉತ್ತಮ ಗುಣಮಟ್ಟದ ಔಷಧಗಳ ಪೂರೈಕೆ ಹಾಗೂ ಕರ್ನಾಟಕದಲ್ಲಿ ಆರೋಗ್ಯ ಹಕ್ಕಿನ ಕಾಯಿದೆ ಜಾರಿಗೆ ಒತ್ತಾಯಿಸಿ ಡ್ರಗ್ ಆ್ಯಕ್ಷನ್ ಫೋರಂ-ಕರ್ನಾಟಕ ಮತ್ತು ಕೆಆರ್‌ಎಸ್ ಪಕ್ಷದ ನೇತೃತ್ವದಲ್ಲಿ ಸಂಘಟನೆಗಳ ಮುಖ್ಯಸ್ಥರು ನಗರದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ಡ್ರಗ್ ಆ್ಯಕ್ಷನ್ ಫೋರಂನ ಅಧ್ಯಕ್ಷ ಡಾ. ಗೋಪಾಲ ದಾಬಡೆ ಮಾತನಾಡಿ, ಎಲ್ಲಾ ಸರ್ಕಾರಿ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಔಷಧಗಳು ಉಚಿತವಾಗಿ ಲಭ್ಯವಾಗುತ್ತಿರಬೇಕು. ಸರ್ಕಾರಿ ಆಸ್ಪತ್ರೆ ವೈದ್ಯರು ಯಾವುದೇ ಕಾರಣಕ್ಕೂ ಔಷಧಗಳನ್ನು ಹೊರಗಡೆ ಬರೆದುಕೊಡಬಾರದು. ಆಸ್ಪತ್ರೆಗಳಲ್ಲಿ ಸಿಗುವ ಔಷಧ ಗುಣಮಟ್ಟ ಉತ್ತಮವಾಗಿರಬೇಕು. ಕರ್ನಾಟಕದಲ್ಲಿ ಆರೊಗ್ಯ ಹಕ್ಕಿನ ಕಾಯಿದೆಯನ್ನು ಜಾರಿಗೆ ತರಬೇಕು. ನಮ್ಮ ದೇಶದಲ್ಲಿ ರಾಜಸ್ಥಾನ ಮಾತ್ರ ಈ ಕಾಯಿದೆ ಜಾರಿಗೆ ತಂದಿದ್ದು, ಸುತ್ತಮುತ್ತಲಿನ ದೇಶಗಳಲ್ಲಿ ಚಿಕಿತ್ಸೆ ಸಂಪೂರ್ಣ ಉಚಿತವಾಗಿ ಸಿಗುತ್ತಿದೆ. 73 ದೇಶಗಳಲ್ಲಿ ವೈದ್ಯಕೀಯ ಸೇವೆಗಳ ಹಕ್ಕು ಜಾರಿಯಲ್ಲಿದ್ದು, ಕರ್ನಾಟಕದಲ್ಲೂ ಜಾರಿಯಾಗಬೇಕೆಂದು ಒತ್ತಾಯಿಸಿದರು.ಡ್ರಗ್ ಆ್ಯಕ್ಷನ್ ಫೋರಂನ ಕಾರ್ಯದರ್ಶಿ ಡಾ.ಎಸ್.ಎಲ್. ಪವಾರ ಮಾತನಾಡಿ, ಖಾಸಗಿ ವಲಯದಲ್ಲಿ ಆಸ್ಪತ್ರೆ ಶುಲ್ಕಗಳಿಗೆ ಮಿತಿ ಇಲ್ಲದ ಕಾರಣ ರೋಗಿಗಳು ಶೋಷಣೆಗೆ ಒಳಗಾಗುತ್ತಿದ್ದಾರೆ. ಇದು ಆರೋಗ್ಯ ಸೇವೆ ದುಬಾರಿ ಮಾಡುವುದಲ್ಲದೇ ಜನರನ್ನು ಬಡತನ ಮತ್ತು ಸಾಲದ ಕಡೆಗೆ ತಳ್ಳುತ್ತದೆ. ಎಲ್ಲಾ ಆಸ್ಪತ್ರೆಗಳ ಶುಲ್ಕಗಳ ಮೇಲೆ ಮಿತಿ ಹಾಕುವ ಸಾಂವಿಧಾನಿಕ ಕರ್ತವ್ಯ ಸರ್ಕಾರದ್ದಾಗಬೇಕು. ರಾಜ್ಯ ಸರ್ಕಾರ ಏಳು ಜಿಲ್ಲಾಸ್ಪತ್ರೆಗಳನ್ನು ಪಿಪಿಪಿ ಮಾದರಿಯಲ್ಲಿ ಖಾಸಗೀಕರಣ ಮಾಡಲು ಮುಂದಾಗಿದೆ. ಇದು ಜನವಿರೋಧಿ ಹಾಗೂ ಸಂವಿಧಾನ ವಿರೋಧಿಯಾಗಿದೆ. ಹಾಗಾಗಿ ವಿಜಯಪುರದಲ್ಲಿ ನೀಡಿದ ಭರವಸೆಯಂತೆ ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣವನ್ನು ಸಂಪೂರ್ಣವಾಗಿ ಕೈ ಬಿಡಬೇಕು ಎಂದು ಒತ್ತಾಯಿಸಿದರು.ಈ ವೇಳೆ ಕೆಆರ್‌ಎಸ್ ಪಕ್ಷದ ಮುಖಂಡರಾದ ಅಮರನಾಥ ಭೂತೆ, ದೀಪಾ ಮರ್ಡೂರ, ಯಲ್ಲಪ್ಪ ಕೆ., ಗಂಗಾ ಕೋರಿ, ಚರಣರಾಜ ರೊಡ್ಡನವರ, ಧರ್ಮಣ್ಣ ಉಪ್ಪಾರ, ಜಯಕೃಷ್ಣ ರೆಡ್ಡಿ ಸೇರಿದಂತೆ ಕೆಆರ್‌ಎಸ್ ಪಕ್ಷದ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.ರಾಜ್ಯದಲ್ಲಿ ಆರೋಗ್ಯವು ಎಲ್ಲಾ ಲಿಂಗ, ವರ್ಗ, ಜಾತಿಯವರ ಹಕ್ಕಾಗಬೇಕು. ಬಡವರಿಗೆ, ಎಲ್ಲಾ ಕಾರ್ಮಿಕರಿಗೆ, ದಲಿತ ಸಮುದಾಯಗಳಿಗೆ, ಆದಿವಾಸಿ ಸಮುದಾಯಗಳಿಗೆ, ಸ್ಲಂ ನಿವಾಸಿಗಳಿಗೆ, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ ಹಾಗೂ ಇತರೆ ಎಲ್ಲ ಶೋಷಿತ ಸಮುದಾಯಗಳಿಗೆ ಉಚಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಕೊಡಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಕೆಆರ್‌ಎಸ್ ಪಕ್ಷ ಜಿಲ್ಲಾಧ್ಯಕ್ಷ ಧರ್ಮರಾಜ ಬಿಂದಲಗಿ ಹೇಳಿದರು.