ಕೊಟ್ಟೂರು: ಸರ್ಕಾರ ಘೋಷಿಸಿರುವ ಪಟ್ಟಿಯಲ್ಲಿ ಕೊಟ್ಟೂರು ತಾಲೂಕನ್ನು ಸೇರಿಸದೇ ಇರುವುದನ್ನು ಖಂಡಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ವಾಸುದೇವ ಮೇಟೆ ಬಣದ ನೇತೃತ್ವದಲ್ಲಿ ರೈತರು, ಮಹಿಳೆಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಇಲ್ಲಿನ ಆರಾಧ್ಯ ದೈವ ಶ್ರೀಗುರುಕೊಟ್ಟೂರೇಶ್ವರ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯಲ್ಲಿದ್ದ ಮಹಿಳೆಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಮಳೆ ಕೊರತೆಯಿಂದ ಹಾನಿಗೊಳಗಾಗಿರುವ ರೈತರ ಸಹಾಯಕ್ಕೆ ಬನ್ನಿ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೆಲವರು ರಸ್ತೆಯಲ್ಲಿ ಬರಿ ಮೈಯಲ್ಲಿ ಹೊರಳಾಡಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ರಾಜ್ಯ ರೈತ ಸಂಘ ಹಸಿರು ಸೇನೆ ವಾಸುದೇವ ಮೇಟೆ ಬಣದ ಜಿಲ್ಲಾಧ್ಯಕ್ಷ ಸಿ.ಎ.ಗಾಳಪ್ಪ, ಸರ್ಕಾರ ಕೂಡಲೇ ರೈತರಿಗೆ ಬೆಳೆ ಪರಿಹಾರ, ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಒದಗಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಕೂಡ್ಲಿಗಿಗೆ ಸೆ. 5ರಂದು ಬರಲಿರುವ ಮುಖ್ಯಮಂತ್ರಿಗಳಿಗೆ ಈ ಸಂಬಂಧ ಮುತ್ತಿಗೆ ಹಾಕಿ ಪ್ರತಿಭಟನೆ ವ್ಯಕ್ತಪಡಿಸುತ್ತೇವೆ. ಕೊಟ್ಟೂರು ತಾಲೂಕಿನಲ್ಲಿ ಸರಿಯಾಗಿ ಬರ ಪರಿಶೀಲನೆ ಮಾಡದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಂತರ ಗ್ರೇಡ್ -2 ತಹಸೀಲ್ದಾರ್ ಪ್ರತಿಭಾ ಎಂ.ಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷೆ ಸಿ. ರೇಖಾ, ಕೆ. ಪವಿತ್ರಾ, ಸಿದ್ದೇಶ, ನಾಗಮ್ಮ, ರೇಖಾ, ನಿಂಗಮ್ಮ, ರೇಣುಕಮ್ಮ, ಸಾಕಮ್ಮ, ಚಂದ್ರಮ್ಮ, ತಿಮ್ಮಪ್ಪ, ಹನುಮಂತಪ್ಪ, ಅಂಜಿನಪ್ಪ ಮತ್ತಿತರರು ಭಾಗವಹಿಸಿದ್ದರು.