ಕನ್ನಡಪ್ರಭ ವಾರ್ತೆ ಮೈಸೂರು
ಗೋಮಾಳ, ಅರಣ್ಯ ಭೂಮಿ, ನಗರ ಪ್ರದೇಶದ 10 ಕಿ.ಮೀ. ವ್ಯಾಪ್ತಿಯಲ್ಲಿ ಸಾಗುವಳಿ ಮಾಡುತ್ತಿರುವ ಬಗರ್ ಹುಕುಂ ರೈತರಿಗೆ ಸಾಗುವಳಿ ಪತ್ರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ ಎಸ್) ಜಿಲ್ಲಾ ಸಮಿತಿಯವರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟಿಸಿದರು.ಕಳೆದ 60 ವರ್ಷಗಳಿಂದ ಗೋಮಾಳ, ಗುಂಡು ತೋಪು, ಅರಣ್ಯ ಭೂಮಿಗಳಲ್ಲಿ ಬಡ ಬಗರ್ ಹುಕುಂ ಸಾಗುವಳಿದಾರರು ಉಳುಮೆ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಬಡ ಸಾಗುವಳಿದಾರರಿಗೆ ಸಾಗುವಳಿ ಪತ್ರ ನೀಡದೆ ಕಾನೂನಿನ ತೊಡಕಿನ ನೆಪ ಹೇಳಿ ವಂಚಿಸಲಾಗುತ್ತಿದೆ. ಆದರೆ, ಕೈಗಾರಿಕೆಗಳಿಗೆ, ಸಂಘ, ಸಂಸ್ಥೆಗಳಿಗೆ ಮಾತ್ರ ರೈತರು ಸಾಗುವಳಿ ಮಾಡುತ್ತಿರುವ ಭೂಮಿ ನೀಡಲಾಗುತ್ತಿದೆ. ಆಗ ಅಡ್ಡಿಯಾಗದ ಕಾನೂನು ಬಡ ರೈತರಿಗೆ ಸಾಗುವಳಿ ನೀಡಲು ಅಡ್ಡಿಯಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಹಸುಗಳಿಗೆ ಗೋಮಾಳ ಇರಬೇಕೆಂಬ ಕಾರಣ ಹೇಳಿ ಸಾಗುವಳಿ ವಂಚಿಸಲಾಗುತ್ತಿದೆ. ಆದರೆ, 100 ಹಸುಗಳಿಗೆ 30 ಎಕರೆ ಜಮೀನು ಬಿಟ್ಟು ಉಳಿದ ಜಮೀನನ್ನು ರೈತರಿಗೆ ನೀಡುವ ಅವಕಾಶವಿದೆ. ಸ್ಥಳೀಯ ಅಧಿಕಾರಿಗಳು ಇದರ ಬಗ್ಗೆ ಗಮನ ನೀಡುತ್ತಿಲ್ಲ. ಮತ್ತೊಂದೆಡೆ ಅರಣ್ಯ ಭೂಮಿಗಳಲ್ಲಿ ಸಾಗುವಳಿಗೆ ಅರ್ಜಿ ಸಲ್ಲಿಸಿ ರೈತರು ವ್ಯವಸಾಯ ಮಾಡುತ್ತಿದ್ದು, ಅರಣ್ಯ ಇಲಾಖೆ ಈಚೆಗೆ ರೈತರಿಗೆ ನೋಟೀಸ್ ನೀಡಿ ಉಳುಮೆ ಮಾಡುತ್ತಿರುವ ಭೂಮಿಗೆ ದಾಖಲೆ ಕೇಳುತ್ತಿದೆ. ಒತ್ತುವರಿ ತೆರವು ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿಪದು.ನಗರದ 10 ಕಿ.ಮೀ ವ್ಯಾಪ್ತಿಯಲ್ಲಿಯೂ ಬಡ ರೈತರು ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಆದರೆ, ಇತ್ತೀಚೆಗೆ ನಗರ ವ್ಯಾಪ್ತಿ ವಿಸ್ತರಣೆಯಾಗುತ್ತಿರುವುದು, ನಗರ ಸಭೆ, ಪುರಸಭೆಗಳು ರಚನೆಯಾಗಿರುವುದರಿಂದ ಈ ರೈತರು ಸಾಗುವಳಿಯಿಂದ ವಂಚಿತರಾಗಿದ್ದಾರೆ. ಬಡ ರೈತರಿಗೆಲ್ಲ ಈ ಭೂಮಿಯೇ ಜೀವನಾಧಾರವಾಗಿರುವುದರಿಂದ ಇವರಿಗೆ ಸಾಗುವಳಿ ಪತ್ರ ನೀಡಬೇಕು. ತಕ್ಷಣವೇ ದರಕಾಸ್ತು ಸಮಿತಿ ರಚಿಸಿ, ಬಾಕಿ ಇರುವ ಅರ್ಜಿ ವಿಲೇವಾರಿ ಮಾಡಬೇಕು ಹಾಗೂ ರೈತರ ಜಮೀನುಗಳನ್ನು ಪಕ್ಕಪೋಡು ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಚಿಕ್ಕಣ್ಣೇಗೌಡ, ಕಾರ್ಯದರ್ಶಿ ಜಗದೀಶ್ ಸೂರ್ಯ, ಪದಾಧಿಕಾರಿಗಳಾದ ಚಂದ್ರಶೇಖರ್ ಕೋಟೆ, ಇಂದಿರಾನಗರ ಪ್ರಶಾಂತ್, ವೀರಭದ್ರಪ್ಪ, ಲೋಕೇಶ್, ಸಣ್ಣನಾಯಕ, ರಾಜಶೇಖರ್, ಪುಟ್ಟರಾಜು, ಚಂದರಾಜು, ಗೋಪಾಲ್, ಕಣಗಾಲು ಲೋಕೇಶ್, ಪುಟ್ಟರಾಜ, ನೂರಾಣಿ, ಚೌಡಮ್ಮ, ಚೆಲುವಮ್ಮ, ರತ್ನಾ, ಮುಳ್ಳೂರು ಮಹಾದೇವ, ಸಿದ್ದಯ್ಯ ಮಂಜೇಗೌಡ, ಜಯರಾಂ ಮೊದಲಾದವರು ಇದ್ದರು.