ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸೇರಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. 2011ರಿಂದ 2025ರವರೆಗೆ ಹಲವು ಮನವಿಗಳನ್ನು ನಿವೇಶನವಿಲ್ಲದ ಬಡವರಿಗೆ ನಿವೇಶನ ವಿತರಿಸಬೇಕೆಂದು ಒತ್ತಾಯಿಸಲಾಗುತ್ತಿದೆ ಎಂದರು.
ಪುರಸಭೆ, ತಹಸೀಲ್ದಾರ್ ಕಚೇರಿಗಳಿಂದ ನಿವೇಶನಗಳ ಬೇಡಿಕೆಗೆ ಅನುಗುಣವಾಗಿ ಭೂಮಿ ಕೊಡಬೇಕೆಂದು ಕೇವಲ ಕಚೇರಿ ಕೆಲಸವಾಗಿ ಸುತ್ತಾಯಿಸಿದ್ದು ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಲವು ಬಾರಿ ಈ ವಿಷಯ ಚರ್ಚಿಸಲಾಗಿದೆ. ಆದರೆ, ಇದುವರೆಗೆ ಯಾವುದೇ ಪ್ರಗತಿ ಕಾಣಲಿಲ್ಲ. ತುರ್ತಾಗಿ ಭೂಮಿ ಗುರುತಿಸಿ ತಮ್ಮ ವಶಕ್ಕೆ ಪಡೆದು ನಿವೇಶನ ರಹಿತರಿಗೆ ಕುಟುಂಬಗಳ ಸಮೀಕ್ಷೆ ನಡೆಸಿ ನಿವೇಶನ ವಿತರಿಸಬೇಕೆಂದು ಒತ್ತಾಯಿಸಿದರು.ಬೀಡಿ ಕಾಲೋನಿ, ಕೆರೆ ಅಂಗಳದಲ್ಲಿ ವಾಸಿಸುತ್ತಿರುವ ಬಡವರಿಗೂ ಹಕ್ಕುಪತ್ರ ನೀಡಬೇಕು. ಶಂಕರ ಮಠಕ್ಕೆ ಹೋಗುವ ರಸ್ತೆಯ ಬಲಭಾಗದಲ್ಲಿ ಹುಣಸೆ ಮರಗಳಿದ್ದು, ಈ ಮರಗಳ ಅಡಿಯಲ್ಲಿ 20 ಮನೆಗಳಿದ್ದು, ಮರದ ಬೇರಿನಿಂದ ಮನೆಗಳೆಲ್ಲವೂ ಸಂಪೂರ್ಣ ಬಿರುಕು ಬಿಟ್ಟು ವಾಸ ಮಾಡಲು ಸಾಧ್ಯವೇ ಇಲ್ಲದ ಪರಿಸ್ಥಿತಿ ಉಲ್ಬಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೃದ್ಧರು, ಅಂಗವಿಕಲರು, ವಿಧವೆಯರಿಗೆ ನೀಡುತ್ತಿರುವ ಮಾಸಾಶನ ಸಮರ್ಪಕವಾಗಿ ಜಾರಿಯಾಗಬೇಕು. ಈಗ ಕೊಡುತ್ತಿರುವ ಮಾಸಾಶನ ಸಾಲದಾಗಿದ್ದು, ಕನಿಷ್ಠ ತಿಂಗಳಿಗೆ 3 ಸಾವಿರ ರು. ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಸಿ.ಕುಮಾರಿ, ಅಮಾಸಯ್ಯ, ಅಬ್ದುಲ್ಲಾ, ಸಂತೋಷ್ ಎಂ.ಎಸ್.ಅರುಣ್‌ಕುಮಾರ್, ಬಾನು, ತಾಜ್, ನಸೀಮ, ಸುಮೇರಾ, ಶಾಕೀರಾ ಸೇರಿದಂತೆ ಹಲವರು ಭಾಗವಹಿಸಿದ್ದರು.