ಯಳಂದೂರು: ಭಾರತದಲ್ಲಿ ಸಂವಿಧಾನದ ಮೂಲಕ ಎಲ್ಲರಿಗೂ ಸಮಾನತೆ ತಂದುಕೊಟ್ಟ ಮಹಾನ್ ವ್ಯಕ್ತಿ ಡಾ.ಬಿ.ಆರ್. ಅಂಬೇಡ್ಕರ್ ಆಗಿದ್ದು, ಇವರು ನಿತ್ಯ ಪೂಜಿತರು ಎಂದು ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯ ಲಿಂಗರಾಜಮೂರ್ತಿ ಅಭಿಪ್ರಾಯಪಟ್ಟರು.
ಅಂಬೇಡ್ಕರ್ ರ ಸಮಾನತೆಯ ಮಂತ್ರ ಇಡೀ ವಿಶ್ವವೇ ಮೆಚ್ಚುವಂತಹದ್ದಾಗಿದೆ. ಇಂತಹ ಮಹಾನ್ ಸಾಧಕ ನಮ್ಮ ದೇಶದಲ್ಲಿ ಹುಟ್ಟಿದ್ದು ನಮ್ಮೆಲ್ಲರ ಹೆಮ್ಮೆಯಾಗಿದೆ. ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ವರ್ಗಗಳಿಗೆ ಇವರು ನೀಡಿದ ಕೊಡುಗೆಯಿಂದ ಇಂದು ಎಲ್ಲರೂ ಸಮಾನರಾಗಿ ಬದುಕುವಂತಾಗಿದೆ. ಒಂದು ಮೂಲೆಯಲ್ಲೇ ಕುಳಿತು ಪುರುಷ ಪ್ರಧಾನ ಸಮಾಜದಲ್ಲಿ ಯಾವುದೇ ಸ್ವತಂತ್ರ ಅನುಭವಿಸದ ಮಹಿಳೆಗೆ ಇಂದು ಆಸ್ತಿಯಲ್ಲೂ ಸಮಪಾಲು ಸಿಗುವಂತೆ ಆಗಿರುವುದು ಇವರು ನೀಡಿರುವ ಸಂವಿಧಾನದ ಕೊಡುಗೆಯಾಗಿದೆ. ಹಾಗಾಗಿ ಅಂಬೇಡ್ಕರ್ ನಮಗೆ ಪ್ರಾತಃಸ್ಮರಣೀಯರಾಗಬೇಕು ಎಂದರು.
ಪಪಂ ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್ ನಾಮನಿರ್ದೇಶಿತ ಸದಸ್ಯ ಶ್ರೀಕಂಠಸ್ವಾಮಿ, ಆಹಾರ ನಿರೀಕ್ಷಕ ರಾಘವೇಂದ್ರ, ರೇಖಾ, ಲಕ್ಷ್ಮೀ, ವಿಜಯ ಸೇರಿದಂತೆ ಅನೇಕರು ಇದ್ದರು. ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಕೆಸ್ತೂರು ಸಿದ್ದರಾಜು, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಸಿ. ರಾಜಣ್ಣ, ಯರಿಯೂರು ನಾಗೇಂದ್ರ, ಸುರೇಶ್, ಕಂದಹಳ್ಳಿ ಕುಮಾರ್, ಮಾದೇಶ್ ಜಿಪಂ ಎಇಇ ಚಂದ್ರಶೇಖರಮೂರ್ತಿ, ಶಿರಸ್ತೇದಾರ್ ಶಾಂತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.ವಿವಿಧೆಡೆ ಪರಿನಿಬ್ಬಾಣ ದಿನಾಚರಣೆ:
ಪಟ್ಟಣದ ಕಂದಾಯ ಇಲಾಖೆಯ ಕಚೇರಿ, ಸೆಸ್ಕ್ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧಡೆ, ತಾಲೂಕಿನ ಗ್ರಾಮ ಪಂಚಾಯಿತಿಗಳು, ಸರ್ಕಾರಿ ಕಚೇರಿಗಳು, ಸಂಘಸಂಸ್ಥೆಗಳೂ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶನಿವಾರ ಅಂಬೇಡ್ಕರ್ ಪರಿನಿಬ್ಬಾಣ ದಿನ ಆಚರಿಸಲಾಯಿತು. ಇದರ ನಿಮಿತ್ತ ಅಂಬೇಡ್ಕರ್ ಭಾವಚಿತ್ರದ ಮುಂಭಾಗ ಮೊಂಬತ್ತಿ ಬೆಳಗಿಸಿ, ಪುಷ್ಪಾರ್ಚನೆ ಮಾಡಲಾಯಿತು. ಅಂಬೇಡ್ಕರ್ ವಿಚಾರಧಾರೆಗಳ ಬಗ್ಗೆ ತಿಳಿಹೇಳಲಾಯಿತು.