ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಪಂಚಾಯ್ತಿ ಆವರಣದ ಎದುರು ಸೇರಿದ ಸಂಘದ ಪದಾಧಿಕಾರಿಗಳು ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಪ್ರತಿಭಟನಾ ಧರಣಿ ನಡೆಸಿದರು. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ಸಿಇಒ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿರುವ ಎಂ.ಪುಟ್ಟಮಾದು ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದರು.
ಜು.೪ರಂದು ಪ್ರಾಂತ ಕೃಷಿ ಕೂಲಿಕಾರರ ಸಂಘದವರು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುವ ವೇಳೆ ಅಹವಾಲು ಸ್ವೀಕರಿಸಲು ಬಂದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಕುರಿತು ಪುಟ್ಟಮಾದು ಅವರು ನೀವು ಈ ಜಿಲ್ಲೆಗೆ ಬಂದು ಜಿಲ್ಲೆಯನ್ನು ಹಾಳು ಮಾಡಿದ್ದೀರಿ ಎಂದು ಅವಹೇಳನಕಾರಿಯಾಗಿ ಹಾಗೂ ನಿಂದನಾತ್ಮಕವಾಗಿ ಘೋಷಣೆ ಕೂಗಿದ್ದಾರೆ. ಈ ಮಾತುಗಳು ಪ್ರಾಮಾಣಿಕ ಅಧಿಕಾರಿಯೊಬ್ಬರ ಮನಸ್ಸಿಗೆ ಘಾಸಿ ಉಂಟುಮಾಡಿದೆ ಎಂದು ಆರೋಪಿಸಿದರು.ಸಿಇಒ ಕೆ.ಆರ್.ನಂದಿನಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಯೋಜನೆ, ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದ್ದಾರೆ. ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಹಲವಾರು ವರ್ಷಗಳಿಂದ ಬಾಕಿ ಇದ್ದ ಕೂಲಿ ಮತ್ತು ಸಾಮಗ್ರಿ ಮೊತ್ತಗಳನ್ನು ಪಾವತಿಸಲು ಅನುಕೂಲವಾಗುವಂತೆ ಹಲವಾರು ಕ್ರಮಗಳನ್ನು ತೆಗೆದುಕೊಂಡು ರೈತರು ಮತ್ತು ಕೂಲಿ ಕಾರ್ಮಿಕರಿಗೆ ನೆರವಾಗಿದ್ದಾರೆ. ಕ್ರಿಯಾಯೋಜನೆ ಸಿದ್ಧಪಡಿಸುವ ವೇಳೆ ಇದ್ದ ಗೊಂದಲಗಳನ್ನು ಪರಿಹರಿಸಿ ಸರ್ಕಾರದ ಅನುಮೋದನೆಗೆ ಸಲ್ಲಿಸಲು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದರು.
ಮಹಿಳಾ ಅಧಿಕಾರಿ ಎಂಬುದನ್ನು ಲೆಕ್ಕಿಸದೆ ಹಗುರವಾಗಿ ಮಾತನಾಡಿ ಅವಮಾನ ಮಾಡಿರುವ ಎಂ.ಪುಟ್ಟಮಾದು ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು, ಸಿಬ್ಬಂದಿ, ಗುತ್ತಿಗೆ, ಹೊರಗುತ್ತಿಗೆ ನೌಕರರು ಆಗ್ರಹಿಸಿದರು.