ಕನ್ನಡಪ್ರಭ ವಾರ್ತೆ ಹಾಸನ
ಇದೇ ವೇಳೆ ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್.ಪಿ. ಧರ್ಮರಾಜು ಮಾಧ್ಯಮದೊಂದಿಗೆ ಮಾತನಾಡಿ, ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೇತರ ಸಂಘಟನೆಯ ಮುಖಂಡರಾದ ಪಂಜಾಬಿನ ಜಗಜಿತ್ ಸಿಂಗ್ ದಲೈವಾಲಾರವರು ಇಂದು ಹರಿಯಾಣದ ಕನೂರಿ ಬಾರ್ಡರನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ದೇಶದ ರೈತರ ಬೇಡಿಕೆಯಾದ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಯಾಗಬೇಕು. ಡಾ ಎಂ.ಎಸ್. ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು. ದೇಶದ ರೈತರ ಸಂಪೂರ್ಣ ಸಾಲಮನ್ನಾ ಆಗಬೇಕು. ಫಸಲ್ ಭೀಮಾ ಬೆಳೆ ವಿಮೆ ಪದ್ಧತಿ ನೀತಿ ಬದಲಾಗಬೇಕು. ೬೦ ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ಬರಬೇಕು ಎಂಬ ಒತ್ತಾಯಗಳ ಬಗ್ಗೆ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ಕಳೆದ ೧೦ ತಿಂಗಳಿಂದ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ. ಇದರಿಂದ ಬೇಸತ್ತ ನಮ್ಮ ರೈತ ಮುಖಂಡರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ ಎಂದರು.
ಈ ಸತ್ಯಾಗ್ರಹವನ್ನು ಬೆಂಬಲಿಸಿ ನಾವು ಇಂದು ಮೌನ ಧರಣಿ ನಡೆಸಿ ಈ ಒತ್ತಾಯ ಪತ್ರ ಸಲ್ಲಿಸಿದ್ದೇವೆ. ಸರ್ಕಾರ ದೇಶದ ರೈತರ ಈ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಿ ರೈತರು ನೆಮ್ಮದಿಯಿಂದ ಕೃಷಿ ಚಟುವಟಿಕೆ ಮಾಡಲು ಅವಕಾಶ ಕಲ್ಪಿಸಬೇಕು. ನಿರ್ಲಕ್ಷ್ಯ ಧೋರಣೆ ತಾಳಿದರೆ ನಾವು ಬೀದಿಗೆ ಇಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸುತ್ತಿದ್ದೇವೆ. ರಾಷ್ಟ್ರಾಧ್ಯಕ್ಷರು ನಮ್ಮ ಮನವಿಯ ಬಗ್ಗೆ ವಿಶೇಷ ಗಮನಹರಿಸಿ ಕೇಂದ್ರ ಸರ್ಕಾರಕ್ಕೆ ಸಮಸ್ಯೆ ಬಗೆಹರಿಸುವಂತೆ ಕಠಿಣ ಸೂಚನೆ ನೀಡಬೇಕು ಎಂದು ಒತ್ತಾಯಿಸುತ್ತೇವೆ ಎಂದು ಹೇಳಿದರು.ಪ್ರತಿಭಟನೆಯಲ್ಲಿ ಒಕ್ಕೂಟದ ಸಂಚಾಲಕ ಆಯುಬ್ ಪಾಷಾ, ಪಿಜಿ ಅಹಮ್ಮದ್, ಮೊಹಮ್ಮದ್ ಫಿರೋಜ್, ಸೋಬನ್ ಬಾಬು, ದರ್ಶನ್, ಶಶಿಧರ್, ವರ್ಧೇಗೌಡ, ಎಂ.ವಿ. ದರ್ಶನ್, ಭೂನಾಕ್ಷ ಇತರರು ಭಾಗವಹಿಸಿದ್ದರು.