ಬಳ್ಳಾರಿ: ನೌಕರರ ಭವಿಷ್ಯನಿಧಿ ಯೋಜನೆ (ಇಪಿಎಸ್-95) ಪಿಂಚಣಿದಾರರಿಗೆ ಕನಿಷ್ಠ ಮಾಸಿಕ ₹7500 ಪಿಂಚಣಿ, ತುಟ್ಟಿಭತ್ಯೆ (ಡಿಎ) ಹಾಗೂ ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ನೂರಾರು ಪಿಂಚಣಿದಾರರು ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.ದೇಶಾದ್ಯಂತ ಲಕ್ಷಾಂತರ ಇಪಿಎಸ್-95 ಪಿಂಚಣಿದಾರರು ಪ್ರಸ್ತುತ ಸರಾಸರಿ 1,170 ಮಾಸಿಕ ಪಿಂಚಣಿಯನ್ನಷ್ಟೇ ಪಡೆಯುತ್ತಿದ್ದು, ನಿರಂತರವಾಗಿ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ಮತ್ತು ಜೀವನ ವೆಚ್ಚದ ನಡುವೆ ಈ ಮೊತ್ತದಲ್ಲಿ ಜೀವನ ಸಾಗಿಸುವುದು ಅಸಾಧ್ಯವಾಗಿದೆ. ಕೇಂದ್ರ ಸರ್ಕಾರ ಕೂಡಲೇ ಇಪಿಎಸ್-95 ಯೋಜನೆಯಡಿ ಕನಿಷ್ಠ ಪಿಂಚಣಿಯನ್ನು ₹7500ಕ್ಕೆ ಹೆಚ್ಚಿಸಿ, ಅದರೊಂದಿಗೆ ತುಟ್ಟಿಭತ್ಯೆ ಜಾರಿಗೊಳಿಸಬೇಕು. ನಿವೃತ್ತ ನೌಕರರಿಗೆ ಅವರ ನಿಜವಾದ ವೇತನದ ಆಧಾರದ ಮೇಲೆ ಹೆಚ್ಚಿನ ಪಿಂಚಣಿ ಪಡೆಯುವ ಆಯ್ಕೆಯನ್ನು ನೀಡಬೇಕು. ಜೊತೆಗೆ ಪಿಂಚಣಿದಾರರು ಹಾಗೂ ಅವರ ಸಂಗಾತಿಗಳಿಗೆ ಉಚಿತ ವೈದ್ಯಕೀಯ ಸೇವೆ ಕಲ್ಪಿಸಬೇಕು. ಇಪಿಎಸ್-95 ಯೋಜನೆಯ ವ್ಯಾಪ್ತಿಗೆ ಒಳಪಡದ ನಿವೃತ್ತ ಉದ್ಯೋಗಿಗಳಿಗೆ ಮಾಸಿಕ ₹5 ಸಾವಿರ ಪಿಂಚಣಿ ನೀಡುವ ವ್ಯವಸ್ಥೆಯನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಐಟಿಯುಸಿ ಕಾರ್ಮಿಕ ಮುಖಂಡ ಎಚ್.ಎ. ಆದಿಮೂರ್ತಿ, ಟಿ. ಚೆನ್ನಪ್ಪ, ಎರ್ರಿಸ್ವಾಮಿ, ಅನಿಲ್ ಇನಾಂದಾರ್, ಚೆನ್ನಬಸಪ್ಪ, ದೊಡ್ಡಬಸಪ್ಪ, ಚಿತ್ರಶೇಖರಯ್ಯ ಸ್ವಾಮಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಇಪಿಎಸ್-95 ಪಿಂಚಣಿದಾರರು ಪಾಲ್ಗೊಂಡು ತಮ್ಮ ಬೇಡಿಕೆಗಳನ್ನು ಸರ್ಕಾರ ತ್ವರಿತವಾಗಿ ಈಡೇರಿಸುವಂತೆ ಒತ್ತಾಯಿಸಿದರು.
ನೌಕರರ ಭವಿಷ್ಯನಿಧಿ ಯೋಜನೆ ಪಿಂಚಣಿದಾರರಿಗೆ ಕನಿಷ್ಠ ಮಾಸಿಕ ₹7500 ಪಿಂಚಣಿ ಹೆಚ್ಚಿಸಲು ಒತ್ತಾಯಿಸಿ ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.