ಕಂಪ್ಲಿ: ಸಮುದಾಯ ಆರೋಗ್ಯ ಕೇಂದ್ರಕ್ಕೆ ನುರಿತ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞ ವೈದ್ಯರನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಕಂಪ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಇಲ್ಲಿನ ಪುರಸಭೆ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಡಿಎಚ್‌ಒ ಖುದ್ದಾಗಿ ಬಂದು ಮನವಿ ಸ್ವೀಕರಿಸುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿಡಿದ್ದರು.
ಈ ವೇಳೆ ಸ್ಥಳಕ್ಕೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಪೂರ್ಣಿಮ ಕಟ್ಟಿಮನಿ ಆಗಮಿಸಿ ಧರಣಿನಿರತರನ್ನು ಸಮಾಧಾನಿಸಿ, ಅನಿವಾರ್ಯ ಕಾರಣಗಳಿಂದ ಡಿಎಚ್‌ಒ ಇಲ್ಲಿಗೆ ಬಂದಿಲ್ಲ. ತೋರಣಗಲ್ಲಿನಿಂದ ಡಾ.ರಜಿಯಾಬೇಗಂ, ರೂಪನಗುಡಿಯಿಂದ ಡಾ.ಚಿತ್ರಾ ವರ್ಣೇಕರ್ ಸ್ತ್ರೀರೋಗ ತಜ್ಞ ತಲಾ ಮೂರು ದಿನ ಬಂದು ತಪಾಸಿಸುತ್ತಿದ್ದಾರೆ. ಖಾಯಂ ಸ್ತ್ರೀ ರೋಗ ತಜ್ಞರ ನೇಮಕಕ್ಕೆ ಅರ್ಜಿ ಕರೆದಿದ್ದರೂ ಯಾರೂ ಅರ್ಜಿ ಸಲ್ಲಿಸಿಲ್ಲ. ತಾತ್ಕಾಲಿಕ ವ್ಯವಸ್ಥೆ ಮಾಡಿದ್ದು ಸಹಕರಿಸುವಂತೆ ಕೋರಿದರು.ಈ ಕುರಿತು ಧರಣಿ ನಿರತರು ಪ್ರತಿಕ್ರಿಯಿಸಿ, ಕೂಡಲೇ ಖಾಯಂ ತಜ್ಞರ ಅವಶ್ಯಕವಿರುವುದಾಗಿ ಆರೋಗ್ಯ ಸಚಿವರ ಗಮನಕ್ಕೆ ತನ್ನಿ. ನಮ್ಮ ಶಾಸಕರೊಂದಿಗೆ ನಿಯೋಗ ಹೋಗಿ ಖಾಯಂ ವೈದ್ಯರನ್ನು ನೇಮಿಸಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಾನಾ ಸಂಘಟನೆಗಳ ಪದಾಧಿಕಾರಿಗಳಾದ ಲಕ್ಷ್ಮಣ, ರವಿ ಮಣ್ಣೂರು, ಸಣಾಪುರ ಮರಿಸ್ವಾಮಿ, ಸಣ್ಣೆಪ್ಪ ತಳವಾರ್, ಸಿ.ಬಸವರಾಜ್, ಎಚ್.ಬಸಪ್ಪ, ಸಿ.ಹುಸೇನಪ್ಪ, ಕೆ.ಮೆಹಬೂಬ್, ಎಚ್.ಶ್ರೀನಿವಾಸ, ಕೆ.ದುರುಗೇಶ ಬರಗೂರು, ಪುರುಷೋತ್ತಮ ಸುಗ್ಗೇನಹಳ್ಳಿ, ಎನ್.ರಾಜಾಭಕ್ಷಿ, ಶೋಭಾರಾಂಪುರ, ಶಿವಗಂಗಮ್ಮ, ಗಂಗಾವತಿಯ ಯನಮೂರ, ಅಜಯ್, ತಾಲೂಕು ಮೇಲ್ವಿಚಾರಣ ಅಧಿಕಾರಿ ಡಾ.ಜಿ.ಅರುಣ್, ಡಾ.ವೀರೇಶ್, ಡಾ.ಸಾಗರ್ ಭರಮಕ್ಕನವರ್, ಡಾ.ಎನ್.ಸುರೇಶಕುಮಾರ್, ಆರೋಗ್ಯ ಸಿಬ್ಬಂದಿ ಪಿ.ಬಸವರಾಜ, ವಿರುಪಾಕ್ಷಿ, ತೃತಿಯ ಲಿಂಗಿ ರಾಜಮ್ಮ ಸೇರಿ ಇತರರಿದ್ದರು.