ರುದ್ರಭೂಮಿಗೆ 2 ಎಕರೆ ಭೂಮಿ ಒದಗಿಸಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Sep 03, 2026, 02:15 AM IST
ಸಂಡೂರು ತಾಲೂಕು ತೋರಣಗಲ್ಲು ರೈಲ್ವೆ ನಿಲ್ದಾಣ ಪ್ರದೇಶ ವ್ಯಾಪ್ತಿಯ 23 ವಾರ್ಡ್‌ಗಳ ಪೈಕಿ ಒಂಬತ್ತು ವಾರ್ಡ್‌ಗಳ ಸಾರ್ವಜನಿಕರ ಅಂತ್ಯಸಂಸ್ಕಾರಕ್ಕೆ ಅನುಕೂಲವಾಗುವಂತೆ 2 ಎಕರೆ ಜಾಗವನ್ನು ರುದ್ರಭೂಮಿಗಾಗಿ ಒದಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾವಲುಪಡೆ ಕಾರ್ಯಕರ್ತರು ಬುಧವಾರ ತೋರಣಗಲ್‌ ಆರ್‌ಎಸ್‌ನಲ್ಲಿ ಪ್ರತಿಭಟನೆ ನಡೆಸಿದರು.  | Kannada Prabha

ಸಾರಾಂಶ

ಜಮೀನು ಮಾಲೀಕರಿಗೆ ಯಾವುದೇ ಪರಿಹಾರ ನೀಡುವ ಅಥವಾ ಪರ್ಯಾಯವಾಗಿ 2 ಎಕರೆ ಜಮೀನು ಒದಗಿಸುವ ಪ್ರಕ್ರಿಯೆ ನಡೆದಿಲ್ಲ

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕು ತೋರಣಗಲ್ಲು ರೈಲ್ವೆ ನಿಲ್ದಾಣ ಪ್ರದೇಶ ವ್ಯಾಪ್ತಿಯ 23 ವಾರ್ಡ್‌ಗಳ ಪೈಕಿ ಒಂಬತ್ತು ವಾರ್ಡ್‌ಗಳ ಸಾರ್ವಜನಿಕರ ಅಂತ್ಯಸಂಸ್ಕಾರಕ್ಕೆ ಅನುಕೂಲವಾಗುವಂತೆ 2 ಎಕರೆ ಜಾಗವನ್ನು ರುದ್ರಭೂಮಿಗಾಗಿ ಒದಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾವಲುಪಡೆ ಕಾರ್ಯಕರ್ತರು ಬುಧವಾರ ತೋರಣಗಲ್‌ನ ಆರ್‌ಎಸ್‌ನಲ್ಲಿ ಪ್ರತಿಭಟನಾ ಧರಣಿ ನಡೆಸಿ ಪಪಂ ಅಧಿಕಾರಿಗೆ ಮನವಿ ಸಲ್ಲಿಸಿದರು.

ನೇತೃತ್ವ ವಹಿಸಿದ್ದ ಕರವೇ ಕಾವಲುಪಡೆ ರಾಜ್ಯಾಧ್ಯಕ್ಷ ಡಾ. ಎಚ್.ಸುರೇಶ್ ಮಾತನಾಡಿ, ತೋರಣಗಲ್ಲು ರೈಲ್ವೆ ನಿಲ್ದಾಣ ಪ್ರದೇಶ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಒಂಬತ್ತು ವಾರ್ಡ್‌ಗಳ ಸಾರ್ವಜನಿಕರ ಅಂತ್ಯಸಂಸ್ಕಾರ ನಡೆಸಲಾಗುತ್ತಿದ್ದ ಸುಮಾರು 2 ಎಕರೆ ಖಾಸಗಿ ಜಮೀನು ಇತ್ತು. ಈ ಜಾಗದಲ್ಲಿ ಸಾಂಪ್ರದಾಯಿಕವಾಗಿ ಅಂತ್ಯಸಂಸ್ಕಾರ ನಡೆಸಲಾಗುತ್ತಿತ್ತು. ಆದರೆ, ಖಾಸಗಿ ಜಮೀನಿನ ಮಾಲೀಕರು ಈಗಾಗಲೇ ಸುಮಾರು ಒಂದೂವರೆ ಎಕರೆ ಜಾಗ ತಮ್ಮ ವಶಕ್ಕೆ ಪಡೆದುಕೊಂಡಿದ್ದು, ಉಳಿದ ಅರ್ಧ ಎಕರೆ ಜಾಗದಲ್ಲಿ ಅಂತ್ಯಸಂಸ್ಕಾರ ನಡೆಸುವುದು ಕಷ್ಟಕರವಾಗಿದೆ ಎಂದು ತಿಳಿಸಿದರು.

ಗ್ರಾಪಂ ಇದ್ದ ಸಂದರ್ಭದಲ್ಲಿ ಸಾರ್ವಜನಿಕರ ಅಂತ್ಯಸಂಸ್ಕಾರಕ್ಕೆ ಬಳಕೆಯಾಗುತ್ತಿದ್ದ ಜಾಗ ಇದೀಗ ಪಪಂ ವ್ಯಾಪ್ತಿಗೆ ಒಳಪಟ್ಟಿದೆ. ಆದರೆ, ಜಮೀನು ಮಾಲೀಕರಿಗೆ ಯಾವುದೇ ಪರಿಹಾರ ನೀಡುವ ಅಥವಾ ಪರ್ಯಾಯವಾಗಿ 2 ಎಕರೆ ಜಮೀನು ಒದಗಿಸುವ ಪ್ರಕ್ರಿಯೆ ನಡೆದಿಲ್ಲ. ಒಂಬತ್ತು ವಾರ್ಡ್‌ಗಳಲ್ಲಿ ಯಾರಾದರೂ ಮೃತಪಟ್ಟ ಸಂದರ್ಭದಲ್ಲಿ ಅಂತ್ಯಸಂಸ್ಕಾರ ನಡೆಸಲು ಸೂಕ್ತ ಜಾಗವಿಲ್ಲದೆ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಸಂಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಜಿಲ್ಲಾಡಳಿತ, ತಾಲೂಕಾಡಳಿತ ಹಾಗೂ ಕುರೆಕುಪ್ಪೆ ಪಪಂ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಖಾಸಗಿ ಜಮೀನನ್ನು ಸರ್ಕಾರ ನಿಗದಿಪಡಿಸುವ ಬೆಲೆಗೆ ಖರೀದಿಸಿ ರುದ್ರಭೂಮಿಗೆ ಮೀಸಲಿಡಬೇಕು. ಇಲ್ಲವೇ ಕಂದಾಯ ಇಲಾಖೆಗೆ ಸೇರಿದ ಸೂಕ್ತ ಜಾಗ ಗುರುತಿಸಿ ಕನಿಷ್ಠ 2 ಎಕರೆ ಭೂಮಿ ಸಾರ್ವಜನಿಕರ ಅಂತ್ಯಸಂಸ್ಕಾರಕ್ಕಾಗಿ ಒದಗಿಸುವಂತೆ ಪಪಂ ಆಡಳಿತಕ್ಕೆ ವಿಶೇಷ ಆದೇಶ ನೀಡಬೇಕು ಎಂದು ಆಗ್ರಹಿಸಿದರು.

ಧರಣಿಯಲ್ಲಿ ಕರವೇ ಕಾವಲುಪಡೆ ಬಳ್ಳಾರಿ ಜಿಲ್ಲಾಧ್ಯಕ್ಷ ಎಸ್.ಎನ್.ನರಸಿಂಹರಾಜು, ಯುವ ಘಟಕ ಜಿಲ್ಲಾಧ್ಯಕ್ಷ ವಿ.ಎಸ್. ಸಾಗರ್ ಅಪ್ಪು, ಜಿಲ್ಲಾ ಉಪಾಧ್ಯಕ್ಷ ಮೋಹನ್ ಶಾನ್‌ಭೋಗ್, ತಾಲೂಕು ಉಪಾಧ್ಯಕ್ಷ ಮುಬಾರಕ್, ಸಂಪತ್, ತೋರಣಗಲ್ಲು ಹೋಬಳಿ ಘಟಕ ಅಧ್ಯಕ್ಷ ಶ್ರೀನಿವಾಸಲು, ಜನಾರ್ದನ್‌ ಸೇರಿದಂತೆ ನೂರಕ್ಕೂ ಹೆಚ್ಚು ಪದಾಧಿಕಾರಿಗಳು ಹಾಗೂ ವಿವಿಧ ಊರುಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುತ್ ನಿಯಮ ತಿದ್ದುಪಡಿ ಕೈಬಿಡಲು ಆಗ್ರಹ
ಮಾನಸಿಕ, ಬೌದ್ಧಿಕ ಬೆಳವಣಿಗೆಗೆ ಕ್ರೀಡೆ ಪೂರಕ: ಸುನೀಲ ಮಹಾಂತಶೆಟ್ಟರ