ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : May 27, 2025, 01:29 AM IST
ಬಳ್ಳಾರಿಯ ನಿವಾಸಿಗಳಿಗೆ ಕನಿಷ್ಠ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿ ಸದಸ್ಯರು ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿ, ಪಾಲಿಕೆ ಅವ್ಯವಸ್ಥೆಯ ಪ್ರತಿಕೃತಿ ದಹಿಸಿದರು.  | Kannada Prabha

ಸಾರಾಂಶ

ನಗರದಲ್ಲಿ ಹಾಳಾಗಿರುವ ರಸ್ತೆ ದುರಸ್ತಿಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿ ಸದಸ್ಯರು (ಬಿಎನ್‌ಎಚ್‌ಎಸ್‌) ಇಲ್ಲಿನ ಮಹಾನಗರ ಪಾಲಿಕೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ನಗರದಲ್ಲಿ ಹಾಳಾಗಿರುವ ರಸ್ತೆ ದುರಸ್ತಿಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿ ಸದಸ್ಯರು (ಬಿಎನ್‌ಎಚ್‌ಎಸ್‌) ಇಲ್ಲಿನ ಮಹಾನಗರ ಪಾಲಿಕೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಸಾರ್ವಜನಿಕರಿಂದ ತೆರಿಗೆ ಸಂಗ್ರಹಿಸುವ ಮಹಾನಗರ ಪಾಲಿಕೆ ಆಡಳಿತ ನಿವಾಸಿಗಳಿಗೆ ಕನಿಷ್ಠ ಮೂಲ ಸೌಕರ್ಯ ಕೊಡುವ ಕಾಳಜಿ ವಹಿಸಿಲ್ಲ. ನಗರದ ಯಾವುದೇ ರಸ್ತೆಗಳು ನೋಡಿದರೂ ಗುಂಡಿಗಳು ಬಿದ್ದಿರುವುದು ಕಂಡು ಬರುತ್ತದೆ. ಇದರಿಂದ ನಿತ್ಯ ಹತ್ತಾರು ಅಪಘಾತಗಳು ಸಂಭವಿಸುತ್ತಿವೆ. ಅನೇಕರು ಕೈ ಕಾಲು ಮುರಿದುಕೊಂಡು ಆಸ್ಪತ್ರೆ ಸೇರುತ್ತಿದ್ದಾರೆ. ಇಷ್ಟಾಗಿಯೂ ಜಿಲ್ಲಾಡಳಿತ ಕ್ರಮ ವಹಿಸುವ ಜವಾಬ್ದಾರಿ ವಹಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ನಗರದಲ್ಲಿ ಅವಶ್ಯಕವಾದ ಜನಬಯಸುವ ಕಾಮಗಾರಿಗಳನ್ನು ತೆಗೆದುಕೊಳ್ಳದೇ ದುಂದುವೆಚ್ಚ ಮಾಡಿ ಜನತೆಯ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ. ಅವೈಜ್ಞಾನಿಕವಾಗಿ ರಾಯಲ್ ವೃತ್ತದಲ್ಲಿ ಗಡಿಯಾರ ಗೋಪುರ ನಿರ್ಮಿಸಲಾಗಿದೆ. ಇದಕ್ಕಾಗಿ ಕೋಟ್ಯಂತರ ರು. ಹಣ ಬಳಕೆ ಮಾಡಲಾಗಿದೆ. ಇದೀಗ ಎಸ್ಪಿ ವೃತ್ತದಲ್ಲಿ ಇದೇ ಬಗೆಯ ಕೆಲಸ ಮುಂದುವರಿದಿದೆ. ಇದರಿಂದಾಗಿಯೇ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಮತ್ತಷ್ಟೂ ಉಲ್ಬಣಿಸಿದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹೋರಾಟ ಸಮಿತಿಯ ಸಲಹೆಗಾರ, ನಿವೃತ್ತ ಮುಖ್ಯ ಎಂಜಿನಿಯರ್ ಉದ್ದಿಹಾಳ್ ಮಾತನಾಡಿ, ನಗರದಲ್ಲಿ ಅಭಿವೃದ್ಧಿ ಸ್ಥಗಿತಗೊಂಡಿದೆ. ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿದ್ದು, ಇವುಗಳನ್ನು ಮುಚ್ಚುವ ಕೆಲಸ ಆಗಬೇಕು. ಎಸ್‌ಎನ್ ಪೇಟೆ ಕೆಳಸೇತುವೆಯಲ್ಲಿ ಚರಂಡಿ ನೀರು ನಿಲ್ಲದಂತೆ ಸುಗಮವಾಗಿ ಮಳೆನೀರು ಹರಿಯುವಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಎನ್. ಪ್ರಮೋದ್, ನಗರದಲ್ಲಿ ಭಾರೀ ವಾಹನಗಳ ಸಂಚಾರದಿಂದ ಸುರಕ್ಷತೆ ಇಲ್ಲದಂತಾಗಿದೆ. ಇದನ್ನು ತಡೆಯಲು ನಗರಕ್ಕೆ ಅವಶ್ಯಕವಾದ ವರ್ತುಲ ರಸ್ತೆಯನ್ನು ತುರ್ತಾಗಿ ನಿರ್ಮಿಸಬೇಕು. ನಗರದಲ್ಲಿ ಬೀದಿನಾಯಿಗಳ ಹಾವಳಿಯನ್ನು ತಡೆಯಲು ತುರ್ತುಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಸಮಿತಿಯ ಸಂಚಾಲಕ ಆರ್.ಸೋಮಶೇಖರ ಗೌಡ ಮಾತನಾಡಿದರು. ಇದೇ ವೇಳೆ ಮಹಾನಗರ ಪಾಲಿಕೆ ಅವ್ಯವಸ್ಥೆಯ ಪ್ರತಿಕೃತಿ ದಹಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿಯ ಪದಾಧಿಕಾರಿಗಳಾದ ಗುರುರಾಜ್, ನಾಗರತ್ನ, ಶಾಂತಾ, ಗೊವಿಂದ್, ಚಂದ್ರಶೇಖರ, ಅಂತೋನಿ, ಈಶ್ವರಿ ಕೆ.ಎಂ., ವೆಂಕಟ್‌ರೆಡ್ಡಿ, ರಾಮರೆಡ್ಡಿ, ವಿದ್ಯಾವತಿ, ಉಮೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮನವಿ ಸ್ವೀಕರಿಸಿ ಮಾತನಾಡಿದ ಪಾಲಿಕೆ ಅಧಿಕಾರಿಗಳು, ಹತ್ತು ದಿನದೊಳಗೆ ನಗರದ ನಾಗರಿಕರ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಭಟನಾಕಾರರು, ಹತ್ತು ದಿನದೊಳಗೆ ಪ್ರಮುಖ ಬೇಡಿಕೆಗಳ ಈಡೇರದೇ ಹೋದಲ್ಲಿ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

10 ಪ್ಯಾರಾದಲ್ಲಿ ಕೇಂದ್ರ ವಿರುದ್ಧ ಟೀಕಾ ಪ್ರಹಾರ
ಬೇಡಿಕೆಗೆ ತಕ್ಕಷ್ಟು ಬರುತ್ತಿಲ್ಲ ಮೈಸೂರು ರೇಷ್ಮೆ ಸೀರೆ