ದಲ್ಲಾಳಿಗಳ ಅವ್ಯವಸ್ಥೆ ಸುಧಾರಣೆಗೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : Jan 25, 2025 1:01 AM

ಸಾರಾಂಶ

ಕೇಂದ್ರ ಸರ್ಕಾರ ವಾಣಿಜ್ಯ ಬೇಳೆ ಶೇಂಗಾ ರಫ್ತು ಮಾಡಬೇಕು, ದಲ್ಲಾಳಿ ಅಂಗಡಿಗಳಲ್ಲಿ ವ್ಯವಸ್ಥೆ ಸುಧಾರಣೆ ಆಗಬೇಕು

ಗಜೇಂದ್ರಗಡ: ಶೇಂಗಾ ಬೆಳೆಗೆ ಬೆಂಬಲ ಬೆಲೆ ನೀಡಿ,ದಲ್ಲಾಳಿ ಅಂಗಡಿಗಳಲ್ಲಿ ವ್ಯವಸ್ಥೆ ಸುಧಾರಣೆ ಸೇರಿ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ಎಪಿಎಂಸಿ ಮುಂಭಾಗದಲ್ಲಿ ಶುಕ್ರವಾರ ಕಾಲಕಾಲೇಶ್ವರ ರೈತ ಸಂಘದಿಂದ ಪ್ರತಿಭಟನೆ ನಡೆಯಿತು.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೂರಾರು ರೈತ ಕುಟುಂಬಗಳು ಶೇಂಗಾ ಬೆಳೆದಿದ್ದು, ಅವುಗಳಿಗೆ ಸೂಕ್ತ ಬೆಂಬಲ ಬೆಲೆ ಇಲ್ಲದ ಪರಿಣಾಮ ರೈತರ ಬೆಳೆದ ಬೆಳೆ ಕೇಳುವರರಿಲ್ಲದಂತಾಗಿದೆ. ಹೀಗಾಗಿ ಗಜೇಂದ್ರಗಡ ಪಟ್ಟಣದಲ್ಲಿಯೇ ಶೇಂಗಾ ಬೆಳೆಗೆ ಬೆಂಬಲ ಬೆಲೆ ನೀಡಿ ಶೀಘ್ರ ಖರೀದಿ ಪ್ರಾರಂಭಿಸಬೇಕು. ಕೇಂದ್ರ ಸರ್ಕಾರ ವಾಣಿಜ್ಯ ಬೇಳೆ ಶೇಂಗಾ ರಫ್ತು ಮಾಡಬೇಕು, ದಲ್ಲಾಳಿ ಅಂಗಡಿಗಳಲ್ಲಿ ವ್ಯವಸ್ಥೆ ಸುಧಾರಣೆ ಆಗಬೇಕು. ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯವಸ್ಥೆ ಸುಧಾರಣೆ ಆಗಬೇಕು. ಟೆಂಡರ್ ೨ ಗಂಟೆಯ ಒಳಗೆ ಟೆಂಡರ್ ನಡೆಸಬೇಕು.ಹಮಾಲರಿಗೆ ಶಾಂಪಾಲ್ ಬಿಡಬಾರದು. ಎಪಿಎಂಸಿ ಕಚೇರಿಯಲ್ಲಿ ರೈತರಿಗೆ ದರ ಮಾಹಿತಿಗಾಗಿ ಬೋರ್ಡ್ ಅಳವಡಿಸಬೇಕು.ರೈತ ಸಂಪರ್ಕ ಕೇಂದ್ರದಲ್ಲಿ ಸರಿಯಾದ ಸಮಯಕ್ಕೆ ಬಿತ್ತನೆ ಬೀಜ ದೊರೆಯುವಂತೆ ಸಂಬಂಧಿಸಿದ ಇಲಾಖೆಗೆ ಪಾವತಿಸಬೇಕು ಎಂದು ಆಗ್ರಹಿಸಿದರು.

ಪಟ್ಟಣದಲ್ಲಿ ಕಳೆದ ವರ್ಷದ ನವೆಂಬರ್ ಕೊನೆಯ ವಾರದವರೆಗೆ ಒಣ ಶೇಂಗಾ ಅಂದಾಜು ₹ ೭೫೦೦ ದಿಂದ ₹ ೮ ಸಾವಿರ ಇತ್ತು. ಆದರೆ ಈಗ ಪ್ರಸ್ತುತ ದರ ಗರಿಷ್ಠ ₹ ೬೨೦೦ವರೆಗೆ ಮಾರಾಟವಾಗುತ್ತಿದೆ. ಹೀಗಾಗಿ ಸರಾಸರಿ ₹೧ ರಿಂದ ೨ ಸಾವಿರದ ವರೆಗೆ ದರ ಕುಸಿತವಾಗಿದೆ. ಕಾರಣ ನೆರೆಯ ತಾಲೂಕು ಕೇಂದ್ರಗಳಿಂದ ಖರೀದಿದಾರರು ಆಗಮಿಸುತ್ತಿಲ್ಲ. ಏಕೆಂದರೆ ಗಜೇಂದ್ರಗಡ ಎಪಿಎಂಸಿ ಯಲ್ಲಿನ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕಾರಣ ಎಂಬ ಆರೋಪಗಳನ್ನು ರೈತರು ಮಾಡಿದರು.

ಪ್ರತಿಭಟನೆ ಹಿನ್ನೆಲೆ ಸ್ಥಳಕ್ಕಾಗಮಿಸಿದ ಉಪ ತಹಸೀಲ್ದಾರ್ ಹಾಗೂ ಎಪಿಎಂಸಿ ಕಾರ್ಯದರ್ಶಿ ಧನರಾಜ ಪಟ್ಟಣಶೆಟ್ಟಿ ಮನವಿ ಸ್ವೀಕರಿಸಿದ ಬಳಿಕ, ವಾರದಲ್ಲಿ ಸುತ್ತಲಿನ ಮಾರುಕಟ್ಟೆಯಲ್ಲಿನ ಖರೀದಿದಾರರಿಗೆ ಸಂಪರ್ಕಿಸಿ ಪಟ್ಟಣದ ಮಾರುಕಟ್ಟೆಗೆ ಪತ್ರದ ಮೂಲಕ ಆಹಾನ್ವಿಸುವೆ ಹಾಗೂ ಬೆಂಬಲ ಬೆಲೆ ಖರೀದಿ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪ್ರಯತ್ನಿಸಲಾಗುವುದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಸಂಘದ ಅಧ್ಯಕ್ಷ ಕಳಕಪ್ಪ ಹೂಗಾರ, ಉಪಾಧ್ಯಕ್ಷ ಮಂಜುನಾಥ ರಾಠೋಡ, ನರಸಿಂಗರಾವ್ ಘೋರ್ಪಡೆ, ಪ್ರಧಾನ ಕಾರ್ಯದರ್ಶೀ ಮುತ್ತು ಹಾದಿಮನಿ, ಪರಶುರಾಮ ರಾಠೋಡ, ಶಿವು ರಾಠೋಡ, ಹುಸೇನ ನಿಶಾನದಾರ, ಬಾಳು ನಿಂಬೋಜಿ, ಹಟೇಲಸಾಬ ಸಾಂಗ್ಲೀಕರ, ಶರಣಪ್ಪ ಚಿಲಝರಿ, ನಾರಾಯಣಪ್ಪ ರಾಠೋಡ, ಸುರೇಶ ಕಲಾಲ, ಬಸಣ್ಣ ಹೊಗರಿ, ಭೀಮಪ್ಪ ತಳವಾರ, ದುಗ್ಗಪ್ಪ ಭಜಂತ್ರಿ, ಪ್ರಕಾಶ ವದೆಗೋಳ, ದೊಡ್ಡಬಸವ ನಂದಿಹಾಳ, ರಾಜೇಸಾಬ ನಿಶಾನದಾರ, ಬಿ.ಎಸ್. ಶೀಲವಂತರ, ಬಾಲು ರಾಠೋಡ ಸೇರಿ ಇತರರು ಇದ್ದರು.

Share this article