ಕಾಡಾನೆಗಳನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : Jan 25, 2025 1:00 AM

ಸಾರಾಂಶ

ಶಿವಮೊಗ್ಗ : ರೈತರ ಬೆಳೆ ನಾಶ ಮಾಡುತ್ತಿರುವ ಹಾಗೂ ರೈತರ ಜೀವ ಪಡೆಯುತ್ತಿರುವ ಕಾಡಾನೆಗಳನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ಮಲೆನಾಡು ಪ್ರದೇಶದ ರೈತರು ನಗರದ ಮುಖ್ಯ ಸಂರಕ್ಷಣಾಧಿಕಾರಿ ಕಚೇರಿ (ಸಿಸಿಎಫ್) ಎದುರು ಪ್ರತಿಭಟನೆ ನಡೆಸಿದರು.

ಶಿವಮೊಗ್ಗ : ರೈತರ ಬೆಳೆ ನಾಶ ಮಾಡುತ್ತಿರುವ ಹಾಗೂ ರೈತರ ಜೀವ ಪಡೆಯುತ್ತಿರುವ ಕಾಡಾನೆಗಳನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ಮಲೆನಾಡು ಪ್ರದೇಶದ ರೈತರು ನಗರದ ಮುಖ್ಯ ಸಂರಕ್ಷಣಾಧಿಕಾರಿ ಕಚೇರಿ (ಸಿಸಿಎಫ್) ಎದುರು ಪ್ರತಿಭಟನೆ ನಡೆಸಿದರು.

ಆನೆಗಳ ದಾಳಿಯಿಂದ ರೈತರ ಬೆಳೆ ನಷ್ಟವಾಗಿದೆ. ಆನೆಗಳ ದಾಳಿಯಿಂದ ರೈತರು ಬಲಿಯಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಕಣ್ಣಿದ್ದು ಕುರುಡರಾಗಿ ವರ್ತಿಸುತ್ತಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು. ಆನೆ ದಾಳಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಮಾಜಿ ಸಚಿವ ಹರತಾಳು ಹಾಲಪ್ಪ, ರೈತರ ಸಮಸ್ಯೆ ನೂರಾರು ಇವೆ. ಕಾಡಾನೆಗಳ ಉಪಟಳ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ದಿವ್ಯ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ವಕ್ಫ್‌ ಬೋರ್ಡ್ ಮತ್ತು ಅರಣ್ಯ ಇಲಾಖೆಗಳು ವಿಚಿತ್ರ ಇಲಾಖೆಗಳು. ಅವರದೇ ಕಾನೂನು ಮಾಡಿಕೊಂಡು ಪಹಣಿ ಏರಿಸುವ ಕೆಲಸ ಮಾಡುತ್ತಾರೆ. ಹಿಡತಕ್ಕೂ ಸಿಗಲ್ಲ, ಬಡಿತಕ್ಕೂ ಸಿಗ್ತಾ ಇಲ್ಲ. ಆನೆಗಳನ್ನು ಸ್ಥಳಾಂತರ ಮಾಡಬೇಕು. ಕಾಡಾನೆಗಳು ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿವೆ. ಭೌಗೋಳಿಕವಾಗಿ ಆನೆಗಳು ವಾಸಿಸುವ ಯೋಗ್ಯವಾದ ಸ್ಥಳವಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ರೈತ ಮುಖಂಡ ವಿರೇಶ್ ಆಲುವಳ್ಳಿ ಮಾತನಾಡಿ, ಕಳೆದ ಒಂದು ವರ್ಷದಿಂದ ಮಲೆನಾಡು ಭಾಗದಲ್ಲಿ ಕಾಡಾನೆಗಳ ಸಂಚಾರ ಪ್ರಾರಂಭವಾಗಿದೆ. ಮುಳುಗಡೆ ರೈತರು ಬದುಕು ಕಟ್ಟಿಕೊಳ್ಳುವ ಹಂತದಲ್ಲಿ ಕಾಡಾನೆಗಳು ರೈತರ ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ಕಾಡು ಪ್ರಾಣಿಗಳ ಬಗ್ಗೆ ಪ್ರೀತಿ ಇದೆ. ಆದರೆ ದೈತ್ಯಾಕಾರದ ಕಾಡಾನೆಗಳಿಗೆ ರೈತರ ಬೆಳೆ ತೃಣಕ್ಕೆ ಸಮನಾಗಿ ಕಾಣುತ್ತಿದೆ. ಕಾಡಾನೆಗಳ ಸ್ಥಳಾಂತರ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಕಳೆದ ವರ್ಷ ಬಸವಾಪುರದಲ್ಲಿ ರೈತ ತಿಮ್ಮಪ್ಪನನ್ನು ತುಳಿದು ಸಾಯಿಸಿತ್ತು. ಪರಿಹಾರ ಕೊಡಲು ಅಧಿಕಾರಿಗಳು ಎರಡು ತಿಂಗಳು ಕಾದು ನಂತರ ನೀಡಿದ್ದಾರೆ. ರೈತ ವಿರೋಧಿ ಸರ್ಕಾರ ಎಂದ ಅವರು, ರೈತರ ಜೀವನವನ್ನು ಕತ್ತಲೆ ಕೂಪದಲ್ಲಿ ಕೂರಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡುತ್ತಿದೆ ಎಂದು ದೂರಿದರು.ಪ್ರತಿಭಟನೆಯಲ್ಲಿ ಟಿ.ಡಿ.ಮೇಘರಾಜ್, ಮಾಜಿ ಶಾಸಕರಾದ ಬಿ.ಸ್ವಾಮಿರಾವ್, ಕೆ.ಬಿ.ಆಶೋಕ್ ನಾಯ್ಕ್, ಪ್ರಮುಖರಾದ ಎಸ್.ದತ್ತಾತ್ರಿ, ವಿರೇಶ್ ಆಲುವಳ್ಳಿ, ರತ್ನಾಕರ್ ಹುನಗೋಡು, ಹರಿಕೃಷ್ಣ, ಮೋಹನ್ ರೆಡ್ಡಿ, ದಿವಾಕರ್ ಬೆಳ್ಳೂರು ಮತ್ತಿತರರಿದ್ದರು.ಏಳೆಂಟು ಕಾಡಾನೆಗಳು ಅಡಿಕೆ, ಕಬ್ಬು, ಬಾಳೆ ಬೆಳೆಯನ್ನು ನಾಶ ಮಾಡುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಕಾಡಾನೆಗಳನ್ನು ಸ್ಥಳಾಂತರ ಮಾಡುವಂತೆ ಸೂಚನೆ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯ ಸರ್ಕಾರ ಅಧಿಕಾರಿಗಳ ಸಭೆ ಕರೆದು ಸೂಕ್ತ ನಿರ್ದೇಶನ ನೀಡಬೇಕು.- ರತ್ನಾಕರ್ ಹುನಗೋಡು.

ಜಿ.ಪಂ ಮಾಜಿ ಸದಸ್ಯ.

ಜಿಲ್ಲಾ ಮಂತ್ರಿ ಬಚ್ಚಾ. ರೈತರ ಮನೆತನದಿಂದ ಬಂದ ಅವರು ರೈತರ ಸಮಸ್ಯೆ ಬಗ್ಗೆ ಏನು ಅರಿವು ಇಲ್ಲ. ಆನೆ ಓಡಿಸಲು ಜಿಲ್ಲಾ ಮಂತ್ರಿ ಆದೇಶ ಬೇಕಾ ? ಅರಣ್ಯ ಅಧಿಕಾರಿಗಳು ಶೀಘ್ರದಲ್ಲೇ ಆನೆ ಓಡಿಸಲು ಕ್ರಮ ಕೈಗೊಳ್ಳಬೇಕು.ಬಿ.ಸ್ವಾಮಿರಾವ್, ಮಾಜಿ ಶಾಸಕರು.

Share this article