- ಅಣೆಕಟ್ಟು ಗೇಟ್ ದುರಸ್ತಿಗೂ ಕಾಸಿಲ್ಲದ ಪಾಪರ್ ಕಾಂಗ್ರೆಸ್ ಸರ್ಕಾರ: ಟೀಕೆ । ಅಧಿಕಾರಿಗಳ ನಿರ್ಲಕ್ಷ್ಯದಿಂದ 5 ಸಾವಿರ ಕ್ಯುಸೆಕ್ ನೀರು ನದಿಪಾಲು
ಕನ್ನಡಪ್ರಭ ವಾರ್ತೆ, ದಾವಣಗೆರೆ
ತರೀಕೆರೆ ತಾಲೂಕಿನ ಲಕ್ಕವಳ್ಳಿ ಬಳಿಯ ಭದ್ರಾ ಡ್ಯಾಂನಿಂದ ಅನಾವಶ್ಯಕವಾಗಿ 5 ಸಾವಿರ ಕ್ಯುಸೆಕ್ ನೀರು ನದಿ ಪಾಲಾಗುತ್ತಿದೆ. ತಕ್ಷಣ ಡ್ಯಾಂಗಳ ಗೇಟುಗಳನ್ನು ದುರಸ್ತಿಪಡಿಸಬೇಕು. ಇಲ್ಲದಿದ್ದರೆ ಜು.8ರಂದು ಭದ್ರಾ ಡ್ಯಾಂ ಬಳಿ ಪ್ರತಿಭಟನೆ ನಡೆಸಬೇಕಾದೀತು ಎಂದು ಬಿಜೆಪಿ ಮುಖಂಡರಾದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಎಚ್ಚರಿಸಿದರು.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಡ್ಯಾಂನಿಂದ ಸಾವಿರಾರು ಕ್ಯುಸೆಕ್ ನೀರು ನದಿಗೆ ಹರಿದು ಪೋಲಾಗುತ್ತಿದೆ. ಇದರಿಂದ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು, ಜನರಿಗೆ ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ತ್ವರಿತವಾಗಿ ಡ್ಯಾಂನ ಗೇಟು ದುರಸ್ತಿಪಡಿಸುವ ಕೆಲಸ ಆಗಬೇಕು ಎಂದರು.
ಡ್ಯಾಂ ಗೇಟುಗಳನ್ನು ದುರಸ್ತಿಪಡಿಸದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ 5 ಸಾವಿರ ಕ್ಯುಸೆಕ್ ನೀರು ನದಿ ಪಾಲಾಗುತ್ತಿದೆ. ಇದರಿಂದ ರೈತರು ಬೆಳೆದ ಬೆಳೆಗಳಿಗೆ ನೀರು ಸಿಗದೇ ತೀವ್ರ ಅನ್ಯಾಯವಾಗಲಿದೆ. ಈ ಬಗ್ಗೆ ಭದ್ರಾ ಕಾಡಾ ಅಧಿಕಾರಿಗಳಿಗೆ ನಾಲ್ಕೈದು ದಿನಗಳ ಹಿಂದೆಯೇ ವಿಚಾರ ತಿಳಿಸಿ, ದುರಸ್ತಿ ಕೈಗೊಳ್ಳುವಂತೆ ರೈತರು ಒತ್ತಾಯಿಸಿದರೂ ಸ್ಪಂದಿಸಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಜು.8ಕ್ಕೆ ಲಕ್ಕವಳ್ಳಿಯ ಭದ್ರಾ ಡ್ಯಾಂ ಬಳಿ ಪ್ರತಿಭಟಿಸಲಾಗುವುದು ಎಂದು ಹೇಳಿದರು.
ಡ್ಯಾಂನ ಗೇಟುಗಳನ್ನು ದುರಸ್ತಿಪಡಿಸಲು ಸಹ ಕಾಂಗ್ರೆಸ್ ಸರ್ಕಾರದ ಬಳಿ ಹಣವಿಲ್ಲ. ಇದೊಂದು ಪಾಪರ್ ಎದ್ದಿರುವ ಸರ್ಕಾರವಾಗಿದೆ. ಭದ್ರಾ ಡ್ಯಾಂ ದುರಸ್ತಿ ಕಾರ್ಯವು ಶಾಶ್ವತವಾಗಿ ಪರಿಹಾರ ಕಾಣಬೇಕು. ಜು.8ರ ಒಳಗಾಗಿ ದುರಸ್ತಿ ಕಾರ್ಯ ಕೈಗೊಳ್ಳದಿದ್ದರೆ, ಅಲ್ಲಿಯೇ ಅನಿರ್ದಿಷ್ಟಾವಧಿ ಹೋರಾಟ ಮುಂದುವರಿಸುತ್ತೇವೆ. ಅಧಿಕಾರಿಗಳ ಬೇಜವಾಬ್ದಾರಿತ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದರು.
ಮಾಡಾಳ ಮಲ್ಲಿಕಾರ್ಜುನ ಮಾತನಾಡಿದರು. ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ, ಪಕ್ಷದ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ, ಹರಿಹರದ ಚಂದ್ರಶೇಖರ ಪೂಜಾರ, ಪ್ರವೀಣ ಜಾಧವ್, ಆರನೇ ಕಲ್ಲು ವಿಜಯಕುಮಾರ, ಬಾತಿ ಶಿವಕುಮಾರ ಇತರರು ಇದ್ದರು.
- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ
ದಾವಣಗೆರೆಯಲ್ಲಿ ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡ ಮಾಡಾಳ್ ಮಲ್ಲಿಕಾರ್ಜುನ ಮತ್ತಿತರ ಮುಖಂಡರು ಇದ್ದರು.