ಹರಪನಹಳ್ಳಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆಗೆ ಒತ್ತಾಯಿಸಿ ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ನೇತೃತ್ವದಲ್ಲಿ ತಾಲೂಕು ಘಟಕದಿಂದ ಶುಕ್ರವಾರ ಸಂಜೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ದೇಶದಲ್ಲಿ ಇಂದು ನೀಟ್ ಪರೀಕ್ಷೆ ಸೇರಿದಂತೆ ವಿವಿಧ ಒಟ್ಟು 89 ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಈಗಾಗಲೇ ಸೋರಿಕೆಯಾಗಿವೆ. ಇದರಿಂದ ಬೇಸತ್ತು ವಿದ್ಯಾರ್ಥಿಗಳು ಯುವಕರು ದೇಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ವಿರುದ್ಧ ಎಲ್ಲ ವಿದ್ಯಾರ್ಥಿ ಯುವಕರು ಧ್ವನಿ ಎತ್ತಿ ಬೆಂಬಲವಾಗಿ ನಿಲ್ಲಬೇಕು ಎಂದರು.
ಇಂದು ಬಿಜೆಪಿ, ಆರ್‌ಎಸ್‌ಎಸ್‌ನವರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಇದಕ್ಕೆ ತಕ್ಕ ಉತ್ತರ ಕೊಡಬೇಕು ಎಂದರೆ ಯುವಕರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರಬೇಕು ಎಂದ ಅವರು, ದೆಹಲಿಯಲ್ಲಿ ಸುಮಾರು 2-3 ಲಕ್ಷ ವಿದ್ಯಾರ್ಥಿಗಳು ದಿನ ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶದ ವಿವಿಧ ಕಡೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಇದಕ್ಕೆ ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ಪ್ರತಿಭಟನೆಯಲ್ಲಿ ಭಾಗವಹಿಸಿ ಶಿಕ್ಷಣ ಮಂತ್ರಿ ಧಮೇಂದ್ರ ಪ್ರಧಾನ ರಾಜೀನಾಮೆ ಕೊಡುವವರೆಗೂ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ದೇಹಲಿಯಲ್ಲಿ ವಿದ್ಯಾರ್ಥಿಯುವಕರು ಪ್ರತಿಭಟನೆ ನಡೆಸುತ್ತಿದ್ದು, ಅವರ ಮೇಲೆ ಕೇಂದ್ರ ಸರ್ಕಾರ ದೌರ್ಜನ್ಯ, ದಬ್ಬಾಳಿಕೆ ನಡೆಸಿ ಅವರ ಅಸ್ತಿತ್ವವನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸಿದೆ. ದೇಶದಲ್ಲಿ ಸಂವಿಧಾನ ಮುಗಿಸುವ ಸಂಚು ನಡೆಸುತ್ತಿದ್ದಾರೆ. ಇದರಿಂದ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿದೆ. ಇಷ್ಟೆಲ್ಲ ಘಟನೆ ನಡೆದರೂ ಪ್ರಧಾನಿ ನೆರೇಂದ್ರ ಮೋದಿ ಮೌನಕ್ಕೆ ಶರಣಾಗಿರುವುದು ವಿಷಾದನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎನ್ಎಸ್‌ಯುಐ ಜಿಲ್ಲಾಧ್ಯಕ್ಷ ತಿಪ್ಪೇಶ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಟಿ.ವೆಂಕಟೇಶ್, ಅಬ್ದುಲ್ ರೇಹಮಾನ್, ಇಸ್ಮಾಯಿಲ್ ಎಲಿಗಾರ, ಬಸವರಾಜ ಸಂಗಪ್ಪನವರ್, ಶಶಿಕುಮಾರನಾಯ್ಕ, ಕನಕಬಸಾಪುರ ಮಂಜುನಾಥ, ಯುವ ಕಾಂಗ್ರೆಸ್ ಜಿಲ್ಲಾ ಉಪಾದ್ಯಕ್ಷ ಜಿಶಾನ್, ಎನ್‌ಎಸ್‌ಯುಐ ರಾಜ್ಯ ಕಾರ್ಯದರ್ಶಿ ವೆಂಕಟೇಶ್, ತಾಲೂಕು ಅಧ್ಯಕ್ಷ ಅಬ್ದುಲ್ ಸಲೇಹ, ಡಂಕಿ ವಾಸಿಮ್, ಶ್ರೀಕಾಂತ, ಶಾಹಿದ್, ಮಂಜುನಾಥ, ಸೇರಿದಂತೆ ವಿದ್ಯಾರ್ಥಿ, ಯುವಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.