ಮುಂಡರಗಿ: ಕಾವೇರಿ 2.0 ತಂತ್ರಾಂಶದಲ್ಲಿ ನೋಂದಣಿ ಕಾರ್ಯದಲ್ಲಿ ಆಗಿರುವಂತ ಲೋಪದೋಷ ಸರಿಪಡಿಸಬೇಕು. ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡಿದ್ದು, ಅದರಂತೆ ರಾಜ್ಯದಲ್ಲೂ ಸರ್ಕಾರ ಜಿಲ್ಲಾ ದಸ್ತಾವೇಜು ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡಬೇಕು ಎಂದು ಜಿಲ್ಲಾ ದಸ್ತಾವೇಜು ಪತ್ರ ಬರಹಗಾರರ ಒಕ್ಕೂಟ ಸಂಘಟನಾ ಕಾರ್ಯದರ್ಶಿ ಹನುಮಂತ ಚನ್ನದಾಸರ ಒತ್ತಾಯಿಸಿದರು.
ರೋಣ: ಸೇವಾ ಭದ್ರತೆ, ಪ್ರತ್ಯೇಕ ಲಾಗಿನ್, ಗುರುತಿನ ಚೀಟಿ ಸೇರಿದಂತೆ ವಿವಿದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪರವಾನಗಿ ಪಡೆದ ದಸ್ತು(ಪತ್ರ) ಬರಹಗಾರರ ಒಕ್ಕೂಟ ಮತ್ತು ದಸ್ತು ಬರಹಗಾರರ ಕ್ಷೇಮಾಭಿವೃದ್ಧಿ ಸಂಘ ರೋಣ ಘಟಕ ವತಿಯಿಂದ ಕಚೇರಿ ಎದುರು ಸೋಮವಾರ ಪ್ರತಿಭಟನೆ ಜರುಗಿತು.ಈ ವೇಳೆ ದಸ್ತು ಬರಹಗಾರರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಅಮರೇಶ ಅಂಗಡಿ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರದ ಕಾವೇರಿ 2 ತಂತ್ರಾಂಶ ಅಳವಡಿಕೆಯಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿರುತ್ತದೆ. ಸಿಟಿಜನ್ ಲಾಗಿನ್ ಬದಲು ಪ್ರತ್ಯೇಕವಾಗಿ ಪತ್ರ ಬರಹಗಾರರಿಗೆ ಲಾಗಿನ್ ನೀಡಬೇಕು. ದಸ್ತು ಬರಹಗಾರರಿಗೆ ಸೇವಾ ಭದ್ರತೆ ಒದಗಿಸಬೇಕು. ಜತೆಗೆ ಪ್ರತ್ಯೇಕವಾಗಿ ಗುರುತಿನ ಚೀಟಿ ಒದಗಿಸಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ನಾಗರಾಜ ಕೆ. ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಅಧ್ಯಕ್ಷ ಅಮರೇಶ ಅಂಗಡಿ, ಸುನೀಲ ಜಾಲಿಹಾಳ, ಉಮೇಶ ಕಿರೇಸೂರ, ಲಿಂಗಪ್ಪ ಲಿಂಗಶೆಟ್ಟಿ, ಶೇಖರಗೌಡ ಬಸನಗೌಡ್ರ, ಅಲ್ಲಾಸಾಬ ಗುದಗನೂರ, ನಾಗರಾಜ ಶಿರಹಟ್ಟಿ ಮುಂತಾದವರು ಭಾಗವಹಿಸಿದ್ದರು.