ರೈಲ್ವೆ ಸೌಲಭ್ಯಗಳ ಬಲವರ್ಧನೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Sep 13, 2024, 01:38 AM IST
ಪೋಟೊ12ಕೆಪಿಎಲ್6: ಅಖಿಲ ಭಾರತ ಪ್ರತಿಭಟನಾ ದಿನದ ಅಂಗವಾಗಿ ಕೊಪ್ಪಳ ನಗರದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ  ಎಐಡಿವೈಓ ಸಂಘಟನೆ ನೇತೃತ್ವದಲ್ಲಿ  ಪ್ರತಿಭಟನೆ ಮಾಡಲಾಯಿತು. | Kannada Prabha

ಸಾರಾಂಶ

ರೈಲ್ವೆ ಸೌಲಭ್ಯಗಳ ಸಮಗ್ರ ಬಲವರ್ಧನೆ ಮತ್ತು ಅಭಿವೃದ್ಧಿಗಾಗಿ ಅಗತ್ಯ ಕ್ರಮ ಕೈಗೊಳ್ಳಲು ಆಗ್ರಹಿಸಿ ಎಐಡಿವೈಓ ಸಂಘಟನೆಯಿಂದ ನಗರದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಖಾಲಿ ಇರುವ ಹುದ್ದೆ ಭರ್ತಿ ಮಾಡಲು ಕೇಂದ್ರ ಸರ್ಕಾರಕ್ಕೆ ಒತ್ತಾಯ

ಕನ್ನಡಪ್ರಭ ವಾರ್ತೆ ಕೊಪ್ಪಳ

ರೈಲ್ವೆ ಸೌಲಭ್ಯಗಳ ಸಮಗ್ರ ಬಲವರ್ಧನೆ ಮತ್ತು ಅಭಿವೃದ್ಧಿಗಾಗಿ ಅಗತ್ಯ ಕ್ರಮ ಕೈಗೊಳ್ಳಲು ಆಗ್ರಹಿಸಿ ಎಐಡಿವೈಓ ಸಂಘಟನೆಯಿಂದ ನಗರದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಎಐಡಿವೈಓ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್ ಮಾತನಾಡಿ, ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಉದ್ಯಮವಾಗಿರುವ ಭಾರತೀಯ ರೈಲ್ವೆಯು ಕ್ರಮೇಣವಾಗಿ ದುರ್ಬಲಗೊಳ್ಳುತ್ತಿದೆ. ರೈಲ್ವೆಯಲ್ಲಿ 3.5 ಲಕ್ಷ ಸಿಬ್ಬಂದಿ ಕೊರತೆ ಇದೆ. ಗ್ರೂಪ್ ಸಿ ಮತ್ತು ಲೆವೆಲ್ 1 ವರ್ಗಗಳಲ್ಲಿ ಸುಮಾರು 2.74 ಲಕ್ಷ ಹುದ್ದೆಗಳು ಖಾಲಿ ಇವೆ. ಜೂನ್ 2023ರ ಅಂಕಿ-ಅಂಶಗಳ ಪ್ರಕಾರ ಸುರಕ್ಷತಾ ವಿಭಾಗಗಳಲ್ಲೇ 1.7 ಲಕ್ಷ ಹುದ್ದೆಗಳು ಖಾಲಿ ಇವೆ.

ದೇಶದಲ್ಲಿ ಕೋಟ್ಯಂತರ ವಿದ್ಯಾವಂತ ನಿರುದ್ಯೋಗಿ ಯುವಕರಿದ್ದಾರೆ. ಕೇಂದ್ರ ಸರ್ಕಾರವು ಖಾಲಿ ಇರುವ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಲು ಮತ್ತು ಸೇವೆಗಳ ವಿಸ್ತರಣೆಗೆ ಅನುಗುಣವಾಗಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಶರಣು ಗಡ್ಡಿ ಮಾತನಾಡಿ, ಭಾರತೀಯ ರೈಲ್ವೆಯ ಸಾರ್ವಜನಿಕ ಸೇವೆಗಳನ್ನು ಒಂದೊಂದಾಗಿ ಖಾಸಗೀಕರಣ ಮತ್ತು ವ್ಯಾಪಾರೀಕರಣಗೊಳಿಸಲಾಗುತ್ತಿದೆ. ರೈಲ್ವೆಯನ್ನು ಜನಸ್ನೇಹಿಯನ್ನಾಗಿಸಲು ರೈಲ್ವೆ ಸೌಲಭ್ಯಗಳ ಸಮಗ್ರ ಬಲವರ್ಧನೆ ಮತ್ತು ಅಭಿವೃದ್ಧಿಗಾಗಿ ತುರ್ತು ಅಗತ್ಯ ಕ್ರಮ ಕೈಗೊಳ್ಳಬೇಕು. ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ ಒದಗಿಸಬೇಕು. ಗಿಣಿಗೇರಿಯಿಂದ ಮೆಹಬೂಬನಗರ ರೈಲ್ವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಗಿಣಿಗೇರಿಯಿಂದ ಸಿಂಧನೂರವರೆಗೆ ಬರುವ ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ, ಸುಭಾನ್, ಪ್ರದೀಪ್, ರಮೇಶ್, ಪ್ರಶಾಂತ್, ಮಾಬು ಸಾಬ್, ಹರ್ಷ ವರ್ದನ್, ರವಿ, ಪ್ರೇಮನಾಥ್ ಮುಂತಾದವರು ಭಾಗವಹಿಸಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌