ರಾಮನಗರ: ಬಾಬು ಜಗಜೀವನ್ ರಾಮ್ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಸಮಾರಂಭಕ್ಕೆ ಉದ್ದೇಶಪೂರ್ವಕವಾಗಿ ಗೈರಾದ ಮತ್ತು ಹಾಸ್ಟೆಲ್ ನವೀಕರಣ ಕಾಮಗಾರಿಯಲ್ಲಿ ಅವ್ಯವಹಾರ ನಡೆಸಿರುವ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಂ.ವಿ.ಶಿವಕುಮಾರ್ ಅಮಾನತುಗೊಳಿಸುವಂತೆ ಆಗ್ರಹಿಸಿ ಸಮತಾ ಸೈನಿಕ ದಳ ಕಾರ್ಯಕರ್ತರು ನಗರದಲ್ಲಿ ಗುರುವಾರ ತಮಟೆ ಚಳವಳಿ ನಡೆಸಿದರು.
ಈ ವೇಳೆ ಸಂಘಟನೆಯ ಯುವ ಘಕಟದ ರಾಜ್ಯಾಧ್ಯಕ್ಷ ಡಾ.ಜಿ.ಗೋವಿಂದಯ್ಯ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್ ಅವರು ಜಿಲ್ಲೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಾಗಿನಿಂದಲೂ, ಕೆ.ಸಿ.ಎಸ್.ಆರ್ ನಿಯಮಾವಳಿ ಅನ್ವಯ ಹಾಗೂ ಸಂವಿಧಾನ ಬದ್ಧವಾಗಿ ಇಲಾಖಾ ಕಾರ್ಯಕ್ರಮಗಳನ್ನು ನಿಯಮಾನುಸಾರ ಅನುಷ್ಠಾನಗೊಳಿಸುವ ಬದಲಿಗೆ ಅನಿಯಮಿತ ಅಕ್ರಮ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಎರಡನೇ ಬಾರಿಗೆ ಜಿಲ್ಲೆಗೆ ಉಪನಿರ್ದೇಶಕರಾಗಿ ಬಂದು ತನ್ನ ಜಾತಿವಾದಿತನದಿಂದ ದಲಿತ ಸಮುದಾಯವನ್ನು ತನ್ನ ನೀತಿಯಿಂದ ಆಡಳಿತದಲ್ಲಿ ದರ್ಪ ತೋರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಯಂತಿಗಳ ಆಚರಣೆ ನಿರ್ಲಕ್ಷ್ಯ ಮಾಡುವ ಅಧಿಕಾರಿ, ಕಳೆದ ಮಾರ್ಚ್ 30ರವರೆಗೆ ಕಚೇರಿಯಲ್ಲಿದ್ದು, ವರ್ಷಾಂತ್ಯದ ಅನುದಾನದ ಬಿಲ್‌ಗಳನ್ನು ವಿಲೇವಾರಿ ಮಾಡಿಕೊಂಡಿದ್ದಾರೆ. ಆದರೆ, ಏಪ್ರಿಲ್ 5ರ ಬಾಬು ಜಗಜೀವನ್ ರಾಮ್ ಜಯಂತಿ ಹಾಗೂ ಏಪ್ರಿಲ್ 14ರ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯಂತಹ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ರಜೆ ಮೇಲೆ ತೆರಳಿ, ಸಮುದಾಯದ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ದೂರಿದರು.ಕಳೆದ ಎರಡು ವರ್ಷಗಳಿಂದಲು ಜಯಂತಿಗಳ ಆಚರಣೆಗೆ ಸಂಬಂಧಿಸಿದಂತೆ ನಾಲ್ಕು ತಾಲೂಕುಗಳಿಗೆ ಯಾವುದೇ ರೀತಿಯ ಹಣ ನೀಡಿಲ್ಲ. ನಾಲ್ಕು ತಾಲ್ಲೂಕುಗಳಲ್ಲಿನ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಸುಳ್ಳು ಬಿಲ್ಲುಗಳನ್ನು ಇವರ ಆಪ್ತ ಎಂಟರ್ ಪ್ರೈಸ್‌ಗಳ ಹೆಸರಿನಲ್ಲಿ ತೆಗೆದುಕೊಂಡಿದ್ದಾರೆ. ಸರ್ಕಾರದಿಂದ ಇಂತಹುದೇ ಕಾರ್ಯಕ್ರಮಗಳ ಅನುಷ್ಠಾನಕ್ಕೆಂದು ಬಿಡುಗಡೆಯಾದ ಅನುದಾನವನ್ನು ಈ ಅಧಿಕಾರಿಯು ತನ್ನ ಇಷ್ಟಕ್ಕೆ ತಕ್ಕಂತೆ ಇನ್ನಿತರೇ ಕೆಲಸ ಮತ್ತು ಕಾಮಗಾರಿಗಳಿಗೆ ಬಳಸಿಕೊಂಡು ಕಾನೂನು ಧಿಕ್ಕರಿಸಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮತಾ ಸೈನಿಕ ದಳ ಯುವ ಘಟಕ ಜಿಲ್ಲಾಧ್ಯಕ್ಷ ಎನ್.ಸುರೇಶ್ ಮಾತನಾಡಿ, ಹಾಸ್ಟೆಲ್ ಗಳಿಗೆ ಪ್ರಾಥಮಿಕ ಹಾಗೂ ಪ್ರಮುಖವಾಗಿ ಬೇಕಾಗುವ ಸಾಮಗ್ರಿಗಳಿಗೆ ಇ ಪ್ರೊಕ್ಯೂರ್ ಮೆಂಟ್ ಮೂಲಕ ಟೆಂಡರ್ ಆಹ್ವಾನಿಸಿ, ಟೆಂಡರ್ ದಾರರನ್ನು ಪುಸಲಾಯಿಸಿಕೊಂಡು ಇರುವ ಸಾಮಗ್ರಿಗಳನ್ನೇ ಸರಬರಾಜಾಗಿರುವಂತೆ ದಾಸ್ತಾನು ಪಡೆದುಕೊಂಡು ಸರಬರಾಜುದಾರರಿಗೆ ಬಿಲ್ ಮಾಡಿಕೊಟ್ಟು ಸರ್ಕಾರದಿಂದ ಅಪಾರ ಮೊತ್ತದ ಹಣ ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು.
25ಕೆಆರ್ ಎಂಎನ್ 3.ಜೆಪಿಜಿ