ಗುಡಿಬಂಡೆ ತಾಲೂಕಿನ ಗರುಡಾಚಾರ್ಲಹಳ್ಳಿಯಲ್ಲಿ ಮೊಹರಂ ಆಚರಣೆ ವೇಳೆ ನಡೆದ ಗಲಾಟೆಯನ್ನು ನಿಯಂತ್ರಿಸಲು ತೆರಳಿದ್ದ ಕರ್ತವ್ಯನಿರತ ಪೊಲೀಸ್ ಪೇದೆಯೊಬ್ಬರ ಮೇಲೆ ಕೆಲ ಯುವಕರು ಹಲ್ಲೆ ನಡೆಸಿದ ಘಟನೆ ನಡೆದಿದೆ.
ಗ್ರಾಮದಲ್ಲಿ ಮೊಹರಂ ಆಚರಣೆ ವೇಳೆ ಕೆಲ ಯುವಕರು ಮದ್ಯದ ಅಮಲಿನಲ್ಲಿ ಗಲಾಟೆ ನಡೆಸುತ್ತಿದ್ದರು. ಸ್ಥಳೀಯರು ಈ ಕುರಿತು ಗುಡಿಬಂಡೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಪೊಲೀಸ್ ಕಾನ್‌ಸ್ಟೇಬಲ್ ಮಹೇಂದ್ರ ಹಾಗೂ ಹೋಂ ಗಾರ್ಡ್ ಪ್ರಸಾದ್ ಸ್ಥಳಕ್ಕೆ ಆಗಮಿಸಿದ್ದಾರೆ. ಗಲಾಟೆ ಮಾಡದಂತೆ ಪೊಲೀಸರು ಯುವಕರಿಗೆ ಬುದ್ಧಿವಾದ ಹೇಳುವ ವೇಳೆ, ನಡೆದ ಘಟನೆಗಳನ್ನು ಪೊಲೀಸ್ ಪೇದೆ ಮಹೇಂದ್ರ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದರಂತೆ. ಇದರಿಂದ ಆಕ್ರೋಶಗೊಂಡ ಯುವಕರ ಗುಂಪು ಮೊಬೈಲ್ ಕಸಿದುಕೊಂಡು, ಪೇದೆ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.ಇಷ್ಟೇ ಅಲ್ಲದೆ, ಕಾನ್‌ಸ್ಟೇಬಲ್ ಕೈಯಲ್ಲಿದ್ದ ಲಾಠಿಯನ್ನು ಕಸಿದುಕೊಂಡು ಅದರಿಂದಲೇ ಹಲ್ಲೆ ನಡೆಸಿರುವ ಆರೋಪವೂ ಕೇಳಿಬಂದಿದೆ. ಈ ವೇಳೆ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂಬಂಧ ಗರುಡಾಚಾರ್ಲಹಳ್ಳಿ ಗ್ರಾಮದ ಶ್ರೀನಿವಾಸ್, ಕಾರ್ತಿಕ್ ಸೇರಿ ಹಲವರ ವಿರುದ್ಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
26ಜಿಯುಡಿ2: ತಾಲೂಕಿನ ಗರುಡಾಚಾರ್ಲಹಳ್ಳಿ ಗ್ರಾಮದಲ್ಲಿ ಮೊಹರಂ ಆಚರಣೆ ವೇಳೆ ನಡೆದ ಗಲಾಟೆ.