ಹಲಗೂರು: ಫೈನಾನ್ಸ್ ಕಿರುಕುಳದಿಂದ ಬೇಸತ್ತು ವ್ಯಕ್ತಿಯೊಬ್ಬ ತಮ್ಮ ಜಮೀನಿನಲ್ಲಿ ಶುಕ್ರವಾರ ಆತ್ಮಹತ್ಯೆ ಮಾಡಿರುವ ಘಟನೆ ಸಮೀಪದ ತಗಡಯ್ಯನ ದೊಡ್ಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ವಾಸಿ ಮಾಚಿ ತಗಡಯ್ಯನ ಪುತ್ರ ನಾಗರಾಜು(35) ವ್ಯವಸಾಯ ಮಾಡುವುದಕ್ಕಾಗಿ ಫೈನಾನ್ಸ್ ನಲ್ಲಿ ಸಾಲ ಪಡೆದಿದ್ದು, ಮಳೆ ಇಲ್ಲದೆ ಫಸಲು ಸಿಗದೆ ತೊಂದರೆಯಲ್ಲಿದ್ದ ಈತನಿಗೆ ಸೂರ್ಯ ಫೈನಾನ್ಸ್ ಕಂಪನಿಯವರು ತುಂಬಾ ಕಿರುಕುಳ ನೀಡುತ್ತಿದ್ದು, ಬೇಸತ್ತು ತಮ್ಮ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಎಂದು ಮೃತನ ತಂದೆ ಫೈನಾನ್ಸ್ ಕಂಪನಿ ಮೇಲೆ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಸಬ್ ಇನ್ಸ್ ಪೆಕ್ಟರ್ ಲೋಕೇಶ್ ಕೇಸು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

---------

ನಾಗರಾಜು ಆತ್ಮಹತ್ಯೆಗೆ ಸುರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಿಬ್ಬಂದಿ ಕಿರುಕುಳ ಕಾರಣ

ಕನ್ನಡಪ್ರಭ ವಾರ್ತೆ ಮಳವಳ್ಳಿ:

ಸುರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಿಬ್ಬಂದಿ ಕಿರುಕುಳದಿಂದ ಸಾವನ್ನಪ್ಪಿದ ತಾಲೂಕಿನ ತಗಡಯ್ಯನದೊಡ್ಡಿ ಗ್ರಾಮದ ನಾಗರಾಜು ಅವರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕೆಂದು ಡಿಎಸ್‌ಎಸ್ ಮುಖಂಡರು ಪಟ್ಟಣದ ಫೈನಾನ್ಸ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಗ್ರಹಿಸಿದರು.


ಮುಖಂಡ ಸಾಗ್ಯ ಕೆಂಪಯ್ಯ ಮಾತನಾಡಿ, ನಾಗರಾಜು ಸುರ್ಯೋದಯ್ ಸ್ಮಾಲ್ ಫೈನಾನ್ಸ್ ನಿಂದ ಸಾಲ ಪಡೆದು ಕಂತುಗಳ ಮೂಲಕ ಸಾಲ ಮರುಪಾವತಿ ಮಾಡುತ್ತಿದ್ದರು. ಕಳೆದ ನಾಲ್ಕು ತಿಂಗಳಿಂದ ಹಣ ಕಟ್ಟಲು ಸಾಧ್ಯವಾಗದ ಕಾರಣ ಫೈನಾನ್ಸ್ ಕಂಪನಿ ಸಿಬ್ಬಂದಿ ನಿರಂತರವಾಗಿ ಕಿರುಕುಳ ನೀಡುವುದರ ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರ ಪರಿಣಾಮ ನಾಗರಾಜು ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.

ಕೂಡಲೇ ಸರ್ಕಾರವಾಗಲಿ ಅಥವಾ ಫೈನಾನ್ಸ್ ಕಂಪನಿಯಾಗಲಿ ಮೃತನ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು, ಸುರ್ಯೋದಯ್ ಸ್ಮಾಲ್ ಫೈನಾನ್ಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದರು.

ಸಾಲ ಮರುಪಾವತಿ ಮಾಡಲು ಒತ್ತಾಯ ಹೇರುವಂತಿಲ್ಲ ಎಂದು ಸರ್ಕಾರ ಕಾನೂನು ಜಾರಿ ಮಾಡಿದರೂ ಕೂಡ ಅನುಷ್ಠಾನಗೊಳಿಸುವಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರ ಪರಿಣಾಮ ಫೈನಾನ್ಸ್ ಕಂಪನಿಗಳು ಸಾಲಗಾರರಿಗೆ ನಿರಂತರವಾಗಿ ಕಿರುಕುಳ ನೀಡುತ್ತಾ ಬರುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿದ್ದರಾಜು, ನಟರಾಜು, ನಾಗರಾಜು, ನಂಜುಂಡಸ್ವಾಮಿ, ಸಿದ್ದರಾಜು, ಚನ್ನಬಸವಯ್ಯ, ಚಂದ್ರಶೇಖರ್, ಮೋಹನ್, ಶಿವಕುಮಾರ್ , ಚಿಕ್ಕಸ್ವಾಮಿ ಸೇರಿದಂತೆ ಇತರರು ಇದ್ದರು.