ವಿಜಯಪುರ: ಕೇವಲ ೨,೦೦೦ ರುಗಳಿಗೆ ಹೀರೋ ಸ್ಪೆಂಡರ್ ಬೈಕ್ ಮಾರುತ್ತಿದ್ದ ಕಳ್ಳನನ್ನು ವಿಜಯಪುರ ಪೊಲೀಸರು ಬಂಧಿಸಿ, 20 ಲಕ್ಷ ರು. ಮೌಲ್ಯದ ಒಂದೇ ಕಂಪನಿಯ 42 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ಎಂ.ವೊ.ಚಂದ್ರಕಾಂತ್‌ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಶಪಡಿಸಿಕೊಂಡಿರುವ ಬೈಕ್‌ಗಳನ್ನು ಅಸಲಿ ಮಾಲೀಕರಿಗೆ ಹಸ್ತಾಂತರಿಸಿ ಮಾತನಾಡಿದ ಅವರು, ಪಟ್ಟಣದ ಇಸ್ಲಾಂ ನಗರದ ಖಲೀಲ್ ಅಹ್ಮದ್ ಅಲಿಯಾಸ್ ಶಫಿವುಲ್ಲಾ (೪೬) ಬಂಧಿತ ಆರೋಪಿ. ಈತ ಪೆಟ್ರೋಲ್ ಬಂಕ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಖಲೀಲ್ ಸುಮಾರು ೨೦ರಿಂದ ೨೫ ಮಾಸ್ಟರ್ ಕೀಗಳನ್ನು ಬಳಸಿ ಯಾರಿಗೂ ಅನುಮಾನ ಬಾರದಂತೆ ಕ್ಷಣಾರ್ಧದಲ್ಲಿ ಬೈಕ್ ಕದಿಯುತ್ತಿದ್ದ. ಹೆಚ್ಚಾಗಿ ಮೈಲೇಜ್ ಬರುವ ವಾಹನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇರುವುದರಿಂದ, ಈತ ಬರೀ ''''''''ಹೀರೋ ಸ್ಪ್ಲೆಂಡರ್ ಪ್ರೋ'''''''' ಕಂಪನಿಯ ಬೈಕ್‌ಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ. ಕದ್ದ ಬೈಕ್‌ಗಳನ್ನು ಕೇವಲ ೨,೦೦೦ ದಿಂದ ೨,೫೦೦ ರೂ.ಗಳ ಅತ್ಯಲ್ಪ ಬೆಲೆಗೆ ಗ್ರಾಹಕರಿಗೆ ಮತ್ತು ಬಡವರಿಗೆ ಸುಲಭವಾಗಿ ಮಾರಾಟ ಮಾಡುತ್ತಿದ್ದ ಎಂದು ಎಸ್ಪಿ ವಿವರಿಸಿದರು. ಈತನಿಗೆ ಹಿಂದಿರುವ ದಲ್ಲಾಳಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದರು. ಜೂನ್ ೧೬ರಂದು ಪಿ.ಮುನಿಕೃಷ್ಣ ತಮ್ಮ ಹೀರೋ ಸ್ಪ್ಲೆಂಡರ್ ಬೈಕನ್ನು ವಿಜಯಪುರ ಬಸ್ ನಿಲ್ದಾಣದ ರೇಷ್ಮೆ ಗೂಡಿನ ಮಾರುಕಟ್ಟೆ ಎದುರು ನಿಲ್ಲಿಸಿ ಯಲಹಂಕಕ್ಕೆ ಹೋಗಿದ್ದರು. ಸಂಜೆ ವಾಪಸ್ ಬರುವಷ್ಟರಲ್ಲಿ ಬೈಕ್ ಕಳವಾಗಿತ್ತು. ಜೂನ್ ೧೮ರಂದು ವಿಜಯಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಿಜಯಪುರ ವೃತ್ತ ನಿರೀಕ್ಷಕ ಲಕ್ಷ್ಮೀನಾರಾಯಣ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ, ಜೂನ್ ೧೯ರಂದು ಆರೋಪಿ ಖಲೀಲ್ ಅಹ್ಮದ್‌ನನ್ನು ಬೈಕ್ ಸಮೇತ ವಶಕ್ಕೆ ಪಡೆದಿದ್ದಾರೆಂದರು. ಆರೋಪಿ ದೇವನಹಳ್ಳಿ, ನಂದಗುಡಿ, ಹೊಸಕೋಟೆ, ಸೂಲಿಬೆಲೆ, ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ, ಶಿಡ್ಲಘಟ್ಟ, ಎಚ್ ಕ್ರಾಸ್ ಹಾಗೂ ಕೋಲಾರ ಜಿಲ್ಲೆಯ ಮಾಸ್ತಿ, ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ೪೨ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಕಳ್ಳತನ ಪ್ರಕರಣ ಭೇದಿಸಿದ ಸಿಐ ಲಕ್ಷ್ಮೀನಾರಾಯಣ್, ಪಿಎಸ್‌ಐ ಸುನೀಲ್ ಕುಮಾರ್, ಶಿವಪ್ರಸಾದ್, ಎಎಸ್‌ಐಗಳಾದ ಚಂದ್ರಪ್ಪ, ನಾಗರಾಜು, ಮುಕ್ತಿಯರ್ ಹಾಗೂ ಸಿಬ್ಬಂದಿ ಮಧುಕುಮಾರ್, ರಾಮಾಂಜಿ, ಅಶ್ವತ್ ರೆಡ್ಡಿ, ಮಲ್ಲಪ್ಪ, ಮಂಜ ನಾಥ್, ರಮೇಶ್, ಪ್ರವೀಣ್ ಅವರ ತಂಡವನ್ನು ಶ್ಲಾಘಿಸಿರುವ ಎಸ್ಪಿ, ಅಭಿನಂದನಾ ಪತ್ರದ ಜೊತೆಗೆ ನಗದು ಬಹುಮಾನ ಘೋಷಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಎಎಸ್ಪಿ ವೆಂಕಟೇಶ್ ಪ್ರಸನ್ನ, ಲಕ್ಷ್ಮೀನಾರಾಯಣ್ ಹಾಗೂ ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ಎಸ್. ಪಾಂಡುರಂಗ ಉಪಸ್ಥಿತರಿದ್ದರು.