ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕು ಒಕ್ಕಲಿಗರ ವೇದಿಕೆ ವತಿಯಿಂದ ಜುಲೈ 1ರಂದು ಪಟ್ಟಣದ ಟಿಎಪಿಸಿಎಂಎಸ್ ಸಮುದಾಯ ಭವನದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ 517ನೇ ಜಯಂತ್ಯುತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.

ಪಟ್ಟಣದ ಬಸವೇಶ್ವರ ನಗರದಲ್ಲಿ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಒಕ್ಕಲಿಗರ ವೇದಿಕೆ ಸದಸ್ಯರು ನೀಡಿದ ಆಹ್ವಾನ ಪತ್ರಿಕೆಯನ್ನು ಸ್ವೀಕರಿಸಿ ಮಾತನಾಡಿದ ಅವರು, ತಾಲೂಕು ಒಕ್ಕಲಿಗರ ವೇದಿಕೆಯಿಂದ ಇದೇ ಪ್ರಥಮವಾಗಿ ಕೆಂಪೇಗೌಡರ ಜಯಂತಿಯನ್ನು ಜಾತ್ಯತೀತ ಮತ್ತು ಪಕ್ಷಾತೀತವಾಗಿ ಆಚರಿಸಲಾಗುತ್ತಿದೆ. ಇದು ಸಂತಸದ ವಿಚಾರ ಎಂದರು.

ನಾಡಪ್ರಭು ಕೆಂಪೇಗೌಡರು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದರೂ ತಮ್ಮ ಆಡಳಿತದ ಅವಧಿಯಲ್ಲಿ ಸರ್ವ ಸಮೂಹಗಳ ಅಭಿವೃದ್ದಿಗೆ ಶ್ರಮಿಸಿದವರು. ಸರ್ವ ಸಮಾಜಗಳ ಹಿತದಲ್ಲಿಯೇ ನಾಡಿನ ಹಿತ ಅಡಗಿದೆ ಎನ್ನುವುದನ್ನು ಅರಿತು ಕೆಂಪೇಗೌಡರು ಎಲ್ಲಾ ಸಮುದಾಯಗಳಿಗೂ ಅನುಕೂಲವಾಗುವಂತೆ ಹಲವು ಪೇಟೆಗಳನ್ನು ನಿರ್ಮಿಸಿ ನಾಡಿನ ಜನರ ಪ್ರೀತಿ, ಗೌರವಕ್ಕೆ ಭಾಜನರಾಗಿದ್ದಾರೆ ಎಂದು ಶ್ಲಾಘಿಸಿದರು.

ಒಕ್ಕಲಿಗರ ವೇದಿಕೆಯ ವತಿಯಿಂದ ಆಚರಿಸುತ್ತಿರುವ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಶ್ರೀಗಳು, ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಡಾ.ನಿಶ್ಚಲಾನಂದನಾಥ ಶ್ರೀಗಳು, ಡಾ.ನಂಜಾವಧೂತ ಶ್ರೀಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಹೇಳಿದರು.


ಕ್ಷೇತ್ರದ ಶಾಸಕನಾಗಿ ನಾನು ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಡಿಸಿಎಂ, ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ, ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಆಗಮಿಸುತ್ತಿದ್ದಾರೆ. ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಸಿ.ಎಸ್.ಪುಟ್ಟರಾಜು, ಕೆ.ಸಿ.ನಾರಾಯಣಗೌಡ ಹಾಗೂ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಒಗ್ಗೂಡಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದರು.

ಸಮಾಜ ಸೇವಕರಾದ ಬೂಕನಕೆರೆ ವಿಜಯ ರಾಮೇಗೌಡರು, ರಾಜ್ಯ ಆರ್.ಟಿ.ಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಬೆಂಗಳೂರಿನ ಅರಿಶಿನಕುಂಟೆ ರಾಮಕೃಷ್ಣೇಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ನೆಲ್ಲಿಗೆರೆ ಬಾಲು, ಅಶೋಕ್ ಜಯರಾಂ ಮತ್ತು ಚಂದ್ರಶೇಖರ್ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಚಲನಚಿತ್ರ ನಿರ್ದೇಶಕ ಜೋಗಿ ಪ್ರೇಮ್, ಕಾಮಿಡಿ ಕಿಲಾಡಿಯ ಕೆ.ಆರ್.ಪೇಟೆ ಶಿವರಾಜ್ ಮತ್ತು ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಕಾವ್ಯ ಶೈವ ಆಗಮಿಸುತ್ತಿದ್ದಾರೆ. ಇವರೊಂದಿಗೆ ಕ್ಷೇತ್ರದ ಎಲ್ಲಾ ಮಾಜಿ ಶಾಸಕರು ಹಾಗೂ ಎಲ್ಲಾ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಹಾಗೂ ಮುಖಂಡರು ಭಾಗವಹಿಸುವರು ಎಂದು ಹೇಳಿದರು.

ವಿವಿಧ ಜಾನಪದ ತಂಡಗಳ ಕಲಾ ಪ್ರದರ್ಶನದೊಂದಿಗೆ ಪಟ್ಟಣದ ಪ್ರವಾಸಿ ಮಂದರ ವೃತ್ತದಿಂದ ಕೆಂಪೇಗೌಡರ ಬಾವಚಿತ್ರದ ಬೃಹತ್ ಮೆರವಣಿಗೆ ನಡೆಯಲಿದೆ. ಅಂದು ಬೆಳಗ್ಗೆ 9 ಘಂಟೆಗೆ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಶಾಸಕ ಎಚ್.ಟಿ.ಮಂಜು ಮನವಿ ಮಾಡಿದರು.

ಈ ವೇಳೆ ತಾಲೂಕು ಒಕ್ಕಲಿಗರ ವೇದಿಕೆ ಅಧ್ಯಕ್ಷ ಮೆಣಸ ಕುಮಾರಗೌಡ, ಕಾರ್ಯದರ್ಶಿ ಗೌರೀಶ್, ವಡಕಹಳ್ಳಿ ಮಂಜೇಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್ ಸೇರಿ ಹಲವರಿದ್ದರು.