ಹಾವೇರಿ: ಗ್ರಾಮೀಣ ಪ್ರದೇಶವನ್ನು ಸ್ವಚ್ಛವಾಗಿಡುವಲ್ಲಿ ಸ್ವಚ್ಛವಾಹಿನಿ ಮಹಿಳಾ ಕಾರ್ಮಿಕರ ಪಾತ್ರ ಬಹುಮುಖ್ಯವಾದುದು. ಇಂತಹ ಶ್ರಮಿಕರು ಯಾವುದೇ ಕನಿಷ್ಠ ಸೌಲಭ್ಯಗಳಿಲ್ಲದೇ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಈ ಕಾರ್ಮಿಕರನ್ನು ವೇತನ ಭದ್ರತೆ ಸೌಲಭ್ಯ ಒದಗಿಸಿ ರಾಜ್ಯ ಸರ್ಕಾರ ಅವರ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಎಂ.ಬಿ. ನಾಡಗೌಡ ಒತ್ತಾಯಿಸಿದರು.ನಗರದ ಹೊರವಲಯದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ತಮ್ಮ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ, ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘಟನೆ ನೇತೃತ್ವದಲ್ಲಿ ಸ್ವಚ್ಛವಾಹಿನಿ ನೌಕರರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಸರ್ಕಾರ ಕೂಡಲೇ ತರಬೇತಿ ಪಡೆದ ಸ್ವಚ್ಛವಾಹಿನಿ ನೌಕರರಿಗೆ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಕೊಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರತಿ ತಿಂಗಳು 5ನೇ ತಾರೀಖಿಗೆ ವೇತನ ನೀಡಬೇಕು. ಬಾಕಿ ವೇತನನ್ನು ಪಾವತಿಸಲು ತಕ್ಷಣ ಕ್ರಮ ಕೈಗೊಳ್ಳಲು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಅನ್ನದಾನಪ್ಪ ಕೆ. ಹೆಬಸೂರು ಮಾತನಾಡಿ, ಸ್ವಚ್ಛವಾಹಿನಿ ಗಾಡಿಗಳಿಗೆ ವಿಮೆ ನವೀಕರಣ ಮಾಡಿಕೊಡಲು ತಕ್ಷಣ ಕ್ರಮ ಕೈಗೊಳ್ಳಬೇಕು. ಸ್ವಚ್ಛತಾ ಸಿಬ್ಬಂದಿಗೆ ರಕ್ಷಣಾ ಸಲಕರಣೆಗಳನ್ನು ಒದಗಿಸಬೇಕು. ಸ್ವಚ್ಛವಾಹಿನಿ ಮಹಿಳಾ ಸಿಬ್ಬಂದಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಆರೋಗ್ಯ ವಿಮೆ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.ಬಸವರಾಜ ಪೂಜಾರ ಮಾತನಾಡಿ, ತರಬೇತಿ ಪಡೆದ ಮಹಿಳಾ ಡ್ರೈವರ್‌ಗಳಿಗೆ ಮಾತ್ರ ಆಟೋಗಳನ್ನು ಕೊಡಲು ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಕೆಟ್ಟು ನಿಂತಿರುವ ಆಟೋಗಳ ದುರಸ್ತಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಸ್ವಚ್ಛವಾಹಿನಿ ನೌಕರರನ್ನು ಪ್ರತಿವರ್ಷ ನವೀಕರಿಸುವ ಬದಲಾಗಿ ಒಮ್ಮೆ ಕೆಲಸಕ್ಕೆ ಸೇರಿಸಿಕೊಂಡವರನ್ನು ಕೆಲಸದಲ್ಲಿ ಕಾಯಂ ಆಗಿ ಮುಂದುವರಿಸಬೇಕು. ಸ್ವಚ್ಛವಾಹಿನಿ ನೌಕರರನ್ನು ಗ್ರಾಮ ಪಂಚಾಯಿತಿ ನೌಕರರೆಂದು ಪರಿಗಣಿಸಿ ಗ್ರಾಮ ಪಂಚಾಯಿತಿ ನೌಕರರಿಗೆ ನೀಡುವ ಸೌಲಭ್ಯಗಳನ್ನು ಜಾರಿಗೊಳಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಮನವಿ ಸ್ವೀಕರಿಸಿ, ಬೇಡಿಕೆಗಳನ್ನು ಈಡೇರಿಸಲು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆಯುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.ಪ್ರತಿಭಟನೆಯಲ್ಲಿ ಜಿಲ್ಲಾ ಮುಖಂಡರಾದ ಜಗದೀಶ ಕೋಟಿ, ಸುಭಾಸ್ ಸೊಟ್ಟೆಪ್ಪನವರ, ದೀಪಾ ಛಲವಾದಿ, ಜ್ಯೋತಿ ಮಾಸುರು, ವೀಣಾ ಮತ್ತೂರು, ಪ್ರೇಮಾ ಅಂಗಡಿ, ವೈಶಾಲಿ ಮೇವುಂಡಿ, ಸರೋಜಾ ಎಸ್., ಗೌರಮ್ಮ ಭಜಂತ್ರಿ ಸೇರಿದಂತೆ ವಿವಿಧ ತಾಲೂಕಿನ ಸ್ವಚ್ಛವಾಹಿನಿ ನೌಕರರು ಪಾಲ್ಗೊಂಡಿದ್ದರು.