ಕೊಪ್ಪಳ:
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಕ್ರಮ ನಡೆಯುವ ಬಗ್ಗೆ ಸಾಕಷ್ಟು ದೂರುಗಳು ಬಂದಿರುವ ಹಿನ್ನೆಲೆ ಜಿಲ್ಲಾದ್ಯಂತ ಪರೀಕ್ಷಾ ಕೊಠಡಿಯಲ್ಲಿ ವೆಬ್ ಕಾಸ್ಟಿಂಗ್ ಕ್ಯಾಮೆರಾ ಕಣ್ಗಾವಲಿನಲ್ಲಿ ಮಾ.21ರಿಂದ ಏ. 4ರ ವರೆಗೆ ಪರೀಕ್ಷೆ ನಡೆಯಲಿವೆ. ಕ್ಯಾಮೆರಾ ಕಣ್ಣಾಡಿದ್ದನ್ನು ಪರಿಶೀಲಿಸಲು ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದೆ.ಜಿಲ್ಲೆಯ 73 ಪರೀಕ್ಷೆ ಕೇಂದ್ರಗಳಲ್ಲಿ ಕ್ಯಾಮೆರಾ ಅಳವಡಿಸಿದ್ದು, ಡಿಡಿಪಿಐ ಕಚೇರಿಯಲ್ಲಿ ಪ್ರತ್ಯೇಕ ಸಿಬ್ಬಂದಿ ಇದನ್ನು ವೀಕ್ಷಿಸಲಿದ್ದಾರೆ. ಈ ಮೂಲಕ ಅಕ್ರಮ ಸೇರಿದಂತೆ ಇನ್ನಿತರ ಯಾವುದೇ ಚಟುವಟಿಕೆ ನಡೆದಿದ್ದು ಕಂಡು ಬಂದರೇ ಮೇಲುಸ್ತುವಾರಿ ನೋಡಿಕೊಳ್ಳುವವರಿಗೆ ಕ್ಷಣಾರ್ಧದಲ್ಲಿ ಮಾಹಿತಿ ರವಾನಿಸಿ ಅಕ್ರಮಕ್ಕೆ ಬ್ರೇಕ್ ಹಾಕುತ್ತಾರೆ. ನಿರ್ಲಕ್ಷ್ಯ ವಹಿಸಿದ ಪರೀಕ್ಷಾ ಕೊಠಡಿ ಮೇಲ್ವಿಚಾರಕರ ಮೇಲೆ ಕ್ರಮವಹಿಸುವ ವಿಶೇಷ ವ್ಯವಸ್ಥೆ ಮಾಡಲಾಗಿದೆ.
25578 ವಿದ್ಯಾರ್ಥಿಗಳು:ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು 25,578 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಕೊಪ್ಪಳ ತಾಲೂಕಿನಲ್ಲಿ 21, ಗಂಗಾವತಿ 23, ಕುಷ್ಟಗಿ 15 ಹಾಗೂ ಯಲಬುರ್ಗಾ 14 ಪರೀಕ್ಷಾ ಕೇಂದ್ರಗಳು ಸೇರಿ 73 ಪರೀಕ್ಷಾ ಕೇಂದ್ರಗಳಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಟ್ಟುನಿಟ್ಟು:ಪರೀಕ್ಷೆಯನ್ನು ಅತ್ಯಂತ ಕಟ್ಟುನಿಟ್ಟಿನ ಮೂಲಕ ನಡೆಸಲು ಸರ್ಕಾರ ಸೂಚಿಸಿರುವ ಹಿನ್ನೆಲೆ ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಪರೀಕ್ಷಾ ಕೊಠಡಿಗಳ ಮೇಲ್ವಿಚಾರಣೆ ಸಿಬ್ಬಂದಿ ಜತೆಗೆ ವೆಬ್ ಕಾಸ್ಟಿಂಗ್‌ಗಾಗಿ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದೆ. ಇದಲ್ಲದೆ ವಿಚಕ್ಷಣ ದಳವೂ ಸಹ ಪ್ರತ್ಯೇಕವಾಹಿ ಕಾರ್ಯನಿರ್ವಹಿಸುತ್ತದೆ. ಇದೆಲ್ಲವೂ ಪ್ರತ್ಯೇಕ ವ್ಯವಸ್ಥೆಯಡಿ ನಡೆಯುವಂತೆ ಮಾಡಲಾಗಿದ್ದರೂ ಸಹ ಒಂದನ್ನೊಂದು ಪರಸ್ಪರವಾಗಿ ನಿಗಾವಹಿಸುವ ವ್ಯವಸ್ಥೆ ಮಾಡಿರುವುದು ವಿಶೇಷ.ಭಯ ಬಿಟ್ಟಾಕಿ
ವಿದ್ಯಾರ್ಥಿಗಳು ಭಯ ಬಿಟ್ಟು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಮನವಿ ಮಾಡಿದೆ. ವೆಬ್‌ಕಾಸ್ಟಿಂಗ್ ಸೇರಿದಂತೆ ಮೊದಲಾದ ಕಟ್ಟುನಿಟ್ಟಿನ ಕ್ರಮದ ಬಗ್ಗೆ ಭಯಪಡುವ ಅಗತ್ಯವಿಲ್ಲ. ಅದು ನಕಲು ಮಾಡುವ ವಿದ್ಯಾರ್ಥಿಗಳಿಗೆ ಹೊರತು ಶಿಸ್ತುಬದ್ಧವಾಗಿ ಪರೀಕ್ಷೆ ಬರೆಯುವವರಿಗಲ್ಲ. ಹೀಗಾಗಿ ಖುಷಿಯಿಂದ ಪರೀಕ್ಷೆ ಎದುರಿಸಿದರೆ ಗೆಲುವು ನಿಮ್ಮದೆ ಎಂದು ಮಕ್ಕಳನ್ನು ಹುರಿದುಂಬಿಸಿದೆ.ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಸಕಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ವೆಬ್‌ಕಾಸ್ಟಿಂಗ್ ನೋಡಿಕೊಳ್ಳಲು ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಡಿಡಿಪಿಐ ಶ್ರೀಶೈಲ ಬಿರಾದರ ಹೇಳಿದರು.