ಹಾವೇರಿ: ಕಾಂಗ್ರೆಸ್ಸಿನ ಹಿರಿಯ ನಾಯಕ ಜಮೀರ್‌ಅಹ್ಮದ್ ಖಾನ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಆಗ್ರಹಿಸಿ ಜಿಲ್ಲಾ ಬಿ.ಝೆಡ್ ಜಮೀರ್‌ಅಹ್ಮದ್ ಖಾನ್ ಅಭಿಮಾನಿ ಬಳಗದಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಜಿಲ್ಲೆಯ ಶಿಗ್ಗಾಂವಿ, ಸವಣೂರು, ಹಾವೇರಿ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ಅಭಿಮಾನಿಗಳು ನಗರದ ಕಾಗಿನೆಲೆ ರಸ್ತೆಯ ಮುರುಘರಾಜೇಂದ್ರ ಮಠದ ಬಳಿ ಜಮಾವಣೆಗೊಂಡಿದ್ದರು. ಅಲ್ಲಿಂದ ಕಾಗಿನೆಲೆ ವೃತ್ತ, ಪಿ.ಬಿ. ರಸ್ತೆ, ಹೊಸಮನಿ ಸಿದ್ದಪ್ಪ ವೃತ್ತದ ಮಾರ್ಗವಾಗಿ ಪ್ರತಿಭಟನಾ ರ‍್ಯಾಲಿ ನಡೆಸಿದ ಕೈ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮೈಲಾರ ಮಹದೇವಪ್ಪ ವೃತ್ತದಲ್ಲಿ ಸಮಾವೇಶಗೊಂಡು ಜಮೀರ್‌ಅಹ್ಮದ್ ಖಾನ್‌ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದರು.ಈ ವೇಳೆ ಮುಸ್ಲಿಂ ಮುಖಂಡ ಮೌಲಾನಾ ಮಹ್ಮದ್ ಸಾಧಿಕ ಮುಲ್ಲಾ ಮಾತನಾಡಿ, ಜಮೀರ್‌ಅಹ್ಮದ್ ಖಾನ್ ಅವರು ಎಲ್ಲ ಸಮಾಜದವರ ನಾಯಕರಾಗಿದ್ದಾರೆ. ಯಾವುದೇ ಜಾತಿ, ಜನಾಂಗ ಎಂದು ಬೇಧ ಭಾವ ಮಾಡದೆ ಎಲ್ಲ ವರ್ಗದ ಜನರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ಕೆಲಸ ಮಾಡುತ್ತಾರೆ. ಕಷ್ಟ ಅಂತ ಬರುವ ಜನರಿಗೆ ಸಹಾಯಹಸ್ತ ಚಾಚುತ್ತಾರೆ. ಅಂತಹ ಜನಸಾಮಾನ್ಯರ ನಾಯಕ ಜಮೀರ್ ಅಹ್ಮದ್ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಮೊದಲ ಕ್ಯಾಬಿನೆಟ್‌ನಲ್ಲಿ ಸಚಿವ ಸ್ಥಾನ ನೀಡದೆ ಕಡೆಗಣಿಸಲಾಗಿದೆ. ಎರಡನೇ ಪಟ್ಟಿಯಲ್ಲಾದರೂ ಸಚಿವ ಸ್ಥಾನ ನೀಡಲೇಬೇಕು. ಒಂದುವೇಳೆ ಸಚಿವ ಸ್ಥಾನ ನೀಡದೆ ಹೋದರೆ 2028ರ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಬಿ.ಝೆಡ್ ಜಮೀರ್ ಅಹ್ಮದ್‌ಖಾನ್ ಅಭಿಮಾನಿ ಬಳಗದ ಮುಖಂಡ ಅಣ್ಣಪ್ಪ ನಡಹಟ್ಟಿ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ, ಡಿಕೆಶಿ ಹೊರತುಪಡಿಸಿದರೆ ಜಮೀರ್‌ಅಹ್ಮದ್ ಖಾನ್ ಒಬ್ಬರೇ ಮಾಸ್ ಲೀಡರ್ ಆಗಿದ್ದಾರೆ. ಸರ್ವಜನಾಂಗದ ನಾಯಕ ಜಮೀರ್‌ಅಹ್ಮದ್ ಅವರಿಗೆ ಹೊಸ ಸರ್ಕಾರದಲ್ಲಿ ಮೊದಲ ಹಂತದಲ್ಲಿ ಸಚಿವ ಸ್ಥಾನ ನೀಡದಿರುವುದು ಲಕ್ಷಾಂತರ ಅಭಿಮಾನಿಗಳಲ್ಲಿ ನೋವುಂಟು ಮಾಡಿದೆ. ಕಾಂಗ್ರೆಸ್‌ನ ಹೈಕಮಾಂಡ ನಾಯಕರು ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕಷ್ಟವಾಗಲಿದೆ ಎಂದರು.ಜಮೀರ್‌ಅಹ್ಮದ್ ಅವರ ವರ್ಚಸ್ಸನ್ನು ಸಹಿಸಿಕೊಳ್ಳದ ಕೆಲವರು ದಾವಣಗೆರೆ ಉಪ ಚುನಾವಣೆ ವೇಳೆ ಸುಮ್ಮನಿದ್ದು, ಡಿಕೆಶಿ ನೇತೃತ್ವದ ಸರ್ಕಾರ ರಚನೆ ಹಿಂದಿನ ದಿನ ಅವರೇ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ವೈರಲ್ ಮಾಡಿದ್ದಾರೆ. ಇದರಿಂದ ಪಕ್ಷಕ್ಕೆ ನಷ್ಟವಾಗಲಿದೆಯೇ ಹೊರತು, ಜಮೀರ್‌ಅಹ್ಮದ್ ಅವರ ವರ್ಚಸ್ಸಿಗೆ ಯಾವುದೇ ನಷ್ಟ ಉಂಟಾಗುವುದಿಲ್ಲ. ಇದೊಂದು ಷಡ್ಯಂತ್ರವಾಗಿದ್ದು, ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದರು.ಈ ವೇಳೆ ಅಭಿಮಾನಿ ಬಳಗದ ಮುಖಂಡರಾದ ಜಿ.ಎ. ಸವಣೂರು, ಶಿವರಾಜ ಅಮರಾಪುರ, ಮಾಲಿಂಗಪ್ಪ ಕುಂಬಾರ, ರುದ್ರೇಶ ಗುಡಗೇರಿ, ಸಂಜೀವ ಪಾಳೆದ, ಡಿ.ಯು. ಅಜ್ಜಣ್ಣವರ, ಇಸಾಕ್ ಶಿಗ್ಗಾವಿ, ಮಲ್ಲಿಕ್ ರೆಹಾನ್, ಇಮ್ತಿಯಾಜ್ ಬಾವಿಕಟ್ಟಿ, ಬಶೀರ್‌ಅಹ್ಮದ್, ಅಕ್ಬರ್‌ಅಲಿ ಶಿಗ್ಗಾವಿ, ಅಬ್ದುಲ್‌ಖಾದರ್ ಹುಲಗೂರ, ಮಾಬುಸಾಬ್ ಜಿಗಳೂರ, ಫಕ್ರುದ್ದೀನ್ ಸವಣೂರು, ಮೌಲಾಲಿ ಶಿಗ್ಗಾಂವಿ, ಜಾಫರ್‌ಸಾಬ್ ಸೇರಿದಂತೆ ಅನೇಕ ಅಭಿಮಾನಿಗಳು ಪಾಲ್ಗೊಂಡಿದ್ದರು.