ಸಮಾಜದ ನಾಯಕ ಶಿವರಾಜ ತಂಗಡಗಿ ಅವರನ್ನು ಈ ಸರ್ಕಾರದಲ್ಲಿ ಇನ್ನು ೨ ವರ್ಷದ ಅವಧಿಗೂ ಸಚಿವ ಸ್ಥಾನ ಮುಂದುವರೆಸಬೇಕು
ಕೊಪ್ಪಳ: ಸಂಘಟನೆ ಮತ್ತು ಸಚಿವರಾಗಿ ಅತ್ಯುತ್ತಮ ಸೇವೆ ಮಾಡಿರುವ ಭೋವಿ ಸಮಾಜದ ಶಿವರಾಜ ತಂಗಡಗಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಹಾಗೂ ಸಿಎಂ ಡಿ.ಕೆ. ಶಿವಕುಮಾರಗೆ ಭೊವಿ ಸಮಾಜ ಆಗ್ರಹಿಸಿದೆ.
ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭೋವಿ ಸಮಾಜದ ಮುಖಂಡ ಬಸವರಾಜ ಭೋವಿ, ಕೂಡಲೇ ತಂಗಡಗಿ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಭೋವಿ ಸಮಾಜಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.ಸಮಾಜದ ನಾಯಕ ಶಿವರಾಜ ತಂಗಡಗಿ ಅವರನ್ನು ಈ ಸರ್ಕಾರದಲ್ಲಿ ಇನ್ನು ೨ ವರ್ಷದ ಅವಧಿಗೂ ಸಚಿವ ಸ್ಥಾನ ಮುಂದುವರೆಸಬೇಕು. ಸಚಿವ ಸ್ಥಾನ ನೀಡಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದರು.
ಸಮಾಜಿಕ ನ್ಯಾಯದಡಿ ನಮ್ಮ ಸಮಾಜಕ್ಕೆ ಅವಕಾಶ ಕಲ್ಪಿಸಬೇಕು. ಶಿವರಾಜ ತಂಗಡಗಿ ಮೂರು ಬಾರಿ ಶಾಸಕರಾಗಿ, ಮೂರು ಬಾರಿ ಸಚಿವರಾಗಿದ್ದಾರೆ. ಆದರೆ ಒಮ್ಮೆಯೂ ಅವರು ಐದು ವರ್ಷ ಅವಧಿ ಪೂರೈಸಿಲ್ಲ. ಜಿಲ್ಲೆಯ ಹಾಗೂ ರಾಜ್ಯದ ಎಲ್ಲ ಸಮಾಜಗಳೊಂದಿಗೂ ಅವರು ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಪ್ರತಿ ಬಾರಿ ಸಚಿವರಾದಾಗಲೂ ಜನಪರ ಕೆಲಸ ಮಾಡಿದ್ದಾರೆ. ಚುನಾವಣೆಯ ವೇಳೆ ರಾಜ್ಯ ಸೇರಿದಂತೆ ಬೇರೆ ರಾಜ್ಯಗಳಲ್ಲಿಯೂ ಉಸ್ತುವಾರಿ ನಿರ್ವಹಿಸಿ ಎಲ್ಲರ ಗಮನ ಸೆಳೆದಿದ್ದಾರೆ ಎಂದರು.ಭೋವಿ ಸಮಾಜದ ಸ್ವಾಮೀಜಿಗಳೂ ಸಹ ಶಿವರಾಜ ತಂಗಡಗಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯ ಮಾಡಿದ್ದು, ಸಮಾಜವೂ ಸಹ ಅವರ ಪರ ನಿಂತಿದೆ. ಭೋವಿ ಸಮಾಜ ಸೇರಿದಂತೆ ಹಿಂದುಳಿದ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಕಿತ್ತು ಹೋದಾಗಲೂ ಶ್ರಮ ವಹಿಸಿ ರೈತರ ಹಿತ ಕಾಯುವ ಕೆಲಸ ಮಾಡಿದ್ದಾರೆ. ಹಾಗಾಗಿ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿ ಜನಪರ ಆಡಳಿತಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯ ಮಾಡಿದರು.
ಸೂಚಪ್ಪ ಬೋವಿ, ಸತ್ಯಪ್ಪ ಬೋವಿ, ಯಮನೂರಪ್ಪ ಬೋವಿ, ಪ್ರಶಾಂತ, ಹುಲಗಪ್ಪ, ಓಜಪ್ಪ, ರಾಘವೇಂದ್ರ, ಹನುಮೇಶ, ಅಳ್ಳಪ್ಪ, ವೆಂಕಟೇಶ ಸೇರಿದಂತೆ ಇತರರು ಇದ್ದರು.