ಯಲಬುರ್ಗಾ: ಪ್ರತಿಯೊಬ್ಬ ವಿದ್ಯಾರ್ಥಿಗಳು ನೈಸರ್ಗಿಕ ಸಂಪನ್ಮೂಲ ಉಳಿಸುವಲ್ಲಿ ಶ್ರಮಿಸಬೇಕು ಎಂದು ಕೊಪ್ಪಳ ವಿವಿ ಕುಲಪತಿ ಎಸ್.ವಿ. ಡಾಣಿ ಹೇಳಿದರು.
ಪಟ್ಟಣದ ಸ್ನಾತಕೋತ್ತರ ಕೇಂದ್ರದಲ್ಲಿ ಭೂಗೋಳಶಾಸ್ತ್ರ ಅಧ್ಯಯನ ವಿಭಾಗದಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಪ್ರಸ್ತುತ ಎಲ್ಲರೂ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಮತ್ತು ಉಳಿಸಲು ಶ್ರಮಿಸಬೇಕಿದೆ. ಸುಂದರ ಪರಿಸರ ನಿರ್ಮಿಸುವಲ್ಲಿ ವಿದ್ಯಾರ್ಥಿಗಳು ಗಿಡ ಮರ ನೆಟ್ಟು ಪೋಷಿಸಬೇಕು. ಅತಿಯಾದ ವಾಯುಮಾಲಿನ್ಯ ಮತ್ತು ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ನಾಶವಾಗುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಮಾಜದಲ್ಲಿ ಪರಿಸರ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಗಿಡ ಮರ ಬೆಳೆಸುವತ್ತ ಕಾಳಜಿ ವಹಿಸಬೇಕು ಎಂದರು.
ಭೂಗೋಳಶಾಸ್ತ್ರ ಅಧ್ಯಯನ ವಿಭಾಗದ ಸಂಯೋಜಕ ಶರಣಪ್ಪ ಗೌಡ್ರ ಮಾತನಾಡಿ, ಪರಿಸರ ಮಾನವನ ಅವಿಭಾಜ್ಯ ಅಂಗವಾಗಿದೆ. ಉತ್ತಮ ಪರಿಸರದಿಂದ ಸಮೃದ್ಧ ಗಾಳಿ ಪಡೆದು ಆರೋಗ್ಯವಂತರಾಗಲು ಸಾಧ್ಯ. ಪ್ರಕೃತಿ ಉಳಿಸಿ ಬೆಳೆಸುವ ಜತೆಗೆ ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೆ ನಿಂತಿದೆ ಎಂದರು.ಉಪನ್ಯಾಸಕ ಶ್ರೀಕಾಂತ, ಪಡಿಯಪ್ಪ, ರವೀಂದ್ರ, ತಿಮ್ಮಾರಡ್ಡಿ, ಕೋಮಲಾ, ರಂಜಿತಾಗೌಡ, ಮಹ್ಮದ್ ಹಾಗೂ ಸ್ನಾತಕೋತ್ತರ ಕೇಂದ್ರದ ಎಲ್ಲ ವಿಭಾಗಗಳ ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಇದ್ದರು.