ಗ್ರಾಪಂ ಉಪಾಧ್ಯಕ್ಷೆ ಪತಿಯ ಕೊಲೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : Nov 6, 2024 12:38 AM

ಸಾರಾಂಶ

ಒಪ್ಪಂದದಂತೆ ದೇವರಸನಹಳ್ಳಿ ಗ್ರಾಪಂ ಅಧ್ಯಕ್ಷರಾಗಬೇಕಿದ್ದ ಸೌಭಾಗ್ಯ ಅವರು ಅಧ್ಯಕ್ಷರಾಗುವುದನ್ನು ತಪ್ಪಿಸಲು ಪಟ್ಟಭದ್ರ ಹಿತಾಶಕ್ತಿಗಳು ಸೌಭಾಗ್ಯ ಅವರ ಪತಿ ನಂಜುಂಡಸ್ವಾಮಿಯನ್ನು ಅ. 6 ರಂದು ದೇವರಸನಹಳ್ಳಿ ಗ್ರಾಮದ ಸಮೀಪ ಸಂಚು ನಡೆಸಿ, ತಡ ರಾತ್ರಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ನಂಜನಗೂಡು

ದೇವರಸನಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಸೌಭಾಗ್ಯ ಅವರ ಪತಿ ನಂಜುಂಡಸ್ವಾಮಿಯನ್ನು ಸಂಚು ರೂಪಿಸಿ ಕೊಲೆ ಮಾಡಿದ ಉಳಿಕೆ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ತಾಲೂಕು ಉಪ್ಪಾರ ಸಮಾಜದವರು ಪಟ್ಟಣದ ತಾಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದರು.

ಉಪ್ಪಾರ ಸಮಾಜದ ಮುಖಂಡ ಹೆಮ್ಮರಗಾಲ ಸೋಮಣ್ಣ ಮಾತನಾಡಿ, ಒಪ್ಪಂದದಂತೆ ದೇವರಸನಹಳ್ಳಿ ಗ್ರಾಪಂ ಅಧ್ಯಕ್ಷರಾಗಬೇಕಿದ್ದ ಸೌಭಾಗ್ಯ ಅವರು ಅಧ್ಯಕ್ಷರಾಗುವುದನ್ನು ತಪ್ಪಿಸಲು ಪಟ್ಟಭದ್ರ ಹಿತಾಶಕ್ತಿಗಳು ಸೌಭಾಗ್ಯ ಅವರ ಪತಿ ನಂಜುಂಡಸ್ವಾಮಿಯನ್ನು ಅ. 6 ರಂದು ದೇವರಸನಹಳ್ಳಿ ಗ್ರಾಮದ ಸಮೀಪ ಸಂಚು ನಡೆಸಿ, ತಡ ರಾತ್ರಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಲಾಗಿತ್ತು, ನಂಜುಂಡಸ್ವಾಮಿಯನ್ನು ಅಧ್ಯಕ್ಷತೆ ವಿಚಾರವಾಗಿ ಮಾತನಾಡಲು ದೂರವಾಣಿ ಕರೆ ಮಾಡಿ ಡಾಬಾ ಗೆ ಬರುವಂತೆ ಮಾಡಿ, ಊಟ ಮಾಡಿಕೊಂಡು ಮನೆಗೆ ತೆರಳುತ್ತಿದ್ದವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಪ್ರಕರಣದ ಸಂಬಂಧ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಸಂಚಿನಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಬಂಧಿಸಿಲ್ಲ, ಪ್ರಕರಣಕ್ಕೆ ಸಂಬಂಧಪಟ್ಟ, ಸಂಚು ರೂಪಿಸಿದ ಪ್ರಮುಖರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಮುಖಂಡ ಎಚ್.ಎಸ್. ಮೂಗಶೆಟ್ಟಿ ಮಾತನಾಡಿ, ನಂಜುಂಡಸ್ವಾಮಿಯನ್ನು ಹಲ್ಲೆ ನಡೆಸಿ ಕೊಲೆ ಮಾಡಿದ ನಂತರ ಕೊಲೆಯನ್ನು ಅಪಘಾತವೆಂಬಂತೆ ಬಿಂಬಿಸಲು ಕೆಲವರು ಪ್ರಯತ್ನಿಸಿ, ಉಪಾಧ್ಯಕ್ಷೆ ಸೌಭಾಗ್ಯ ಅವರಿಂದ ಅಪಘಾತದಿಂದ ನಂಜುಂಡಸ್ವಾಮಿ ಸತ್ತಿರುವುದಾಗಿ ಪೊಲೀಸರಿಗೆ ಹೇಳಿಕೆ ನೀಡುವಂತೆ ಕೆಲವರು ಪ್ರಯತ್ನ ನಡೆಸಿದ್ದರು, ಸಂಚಿನಲ್ಲಿ ಇವರು ಭಾಗಿಯಾಗಿದ್ದರು, ಆದ್ದರಿಂದ ಪ್ರಮುಖ ಸಂಚು ಕೋರರನ್ನು ಬಂಧಿಸಬೇಕು, ಪತಿಯನ್ನು ಕಳೆದುಕೊಂಡು ಅನಾಥಳಾಗಿರುವ ಸೌಭಾಗ್ಯ ಅವರಿಗೆ ಸರ್ಕಾರ ಆರ್ಥಿಕ ನೆರವನ್ನು ನೀಡಬೇಕು ಎಂದು ಹೇಳಿದರು.

ದೇವರಸನಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಸೌಭಾಗ್ಯ, ಜಿಪಂ ಮಾಜಿ ಸದಸ್ಯರಾದ ಕೆ.ಬಿ. ಸ್ವಾಮಿ, ಮುಖಂಡರಾದ, ನಾಗರಾಜು, ತಾಪಂ ಮಾಜಿ ಸದಸ್ಯ ಶಿವಣ್ಣ, ಮಹದೇವಸ್ವಾಮಿ, ನಗರಸಭೆ ಸದಸ್ಯ ಸಿದ್ದರಾಜು, ಅಣ್ಣಯ್ಯಶೆಟ್ಟಿ, ಕನಕನಗರ ಮಹದೇವು, ಜಿಪಂ ಮಾಜಿ ಸದಸ್ಯೆ ಲತಾಸಿದ್ದಶೆಟ್ಟಿ, ಮಹದೇವಸ್ವಾಮಿ, ಮುದ್ದುಮಾದಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಮುದ್ದುಮಾದಶೆಟ್ಟಿ, ಎಂ. ರಾಜು, ಮಂಜು, ಶ್ರೀನಿವಾಸ್, ಗೋವಿಂದರಾಜು, ಚಿಕ್ಕಣ್ಣ, ಮಹೇಶ್, ಕಾಳಪ್ಪ, ಗಜೇಂದ್ರ, ಸಿದ್ದರಾಜು, ನಗರಸಭಾ ಸದಸ್ಯ ಸಿದ್ದರಾಜು, ತಾಲೂಕು ಉಪ್ಪಾರ ಸಂಘದ ಕಾರ್ಯದರ್ಶಿ ನಾಗರಾಜು ಇದ್ದರು.

Share this article