ಕಟ್ಟಡ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

KannadaprabhaNewsNetwork | Published : Jul 16, 2024 12:36 AM

ಸಾರಾಂಶ

ಕಟ್ಟಡ ಕಾರ್ಮಿಕರ ಹಲವಾರು ದಿನಗಳ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಇಲ್ಲಿನ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವರ ಕ್ವಾರಿ ಕಾರ್ಮಿಕರ ಸಂಘ ಹಾಗೂ, ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ತು ಜಂಟಿಯಾಗಿ, ಕಟ್ಟಡ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ, ಇಲ್ಲಿನ ಲಾಲ್‌ ಬಹದ್ಧೂರ್‌ ಶಾಸ್ತ್ರಿ ವೃತ್ತದಲ್ಲಿ, ಪ್ರತಿಭಟನೆ ಹಮ್ಮಿಕೊಂಡು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಬಾವಾಜಿ ಜಂಗ್ಲಿಸಾಬ್‌ ಮಾತನಾಡಿ, ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಮನ್ವಯ ಸಮಿತಿಯ ತೀರ್ಮಾನದಂತೆ, ಕಟ್ಟಡ ಕಾರ್ಮಿಕರ ಹಲವಾರು ದಿನಗಳ ಬೇಡಿಕೆಗಳನ್ನು ತಮ್ಮ ಸರ್ಕಾರ ಹಾಗೂ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರ ಈಡೇರಿಸಿಲ್ಲ, ಬದಲಾಗಿ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸಿಕೊಂಡು ಬಂದಿದ್ದೀರಿ, ಈ ಕೂಡಲೇ ನ್ಯಾಯ ಸಮ್ಮತವಾಗಿರುವ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸಮಿತಿ ಸದಸ್ಯ ಸುರೇಶ ಹಲಗಿ ಮಾತನಾಡಿ, ಕಟ್ಟಡ ಕಾರ್ಮಿಕರ ಬೇಡಿಕೆಗಳ ಕುರಿತು, ಹಿಂದಿನ ಸರ್ಕಾರಕ್ಕೂ ಸಮನ್ವಯ ಸಮಿತಿ ನೇತೃತ್ವದಲ್ಲಿ ಹಾಗೂ ಇತರೆ ರಾಷ್ಟ್ರೀಯ ಕಾರ್ಮಿಕ ಸಂಘಟನೆಗಳು ಪ್ರತ್ಯೇಕವಾಗಿ ಮನವಿ ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ, ಬದಲಾಗಿ ಕಟ್ಟಡ ಕಾರ್ಮಿಕರಿಗೆ ಅವಶ್ಯಕತೆ ಇಲ್ಲದ, ಹಲವಾರು ತರಹದ ಕಿಟ್‌ಗಳು, ಕೋಟ್ಯಂತರ ಸಂಖ್ಯೆಯ ಕ್ಯಾಲೆಂಡರ್‌ಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸುವ ಬದಲಾಗಿ, ₹500 ಕೋಟಿಗಿಂತಲೂ ಹೆಚ್ಚು ಖಾಸಗಿ ಆಸ್ಪತ್ರೆಗಳಿಗೆ ವೈಧ್ಯಕೀಯ ತಪಾಸಣೆಗೆ ನೀಡಿರುವ ನೀತಿಗಳಂತಹ ಕ್ರಮಗಳು, ಮಂಡಳಿಯ ಹಣ ದುಂದು ವೆಚ್ಚಕ್ಕೆ ಕಾರಣವಾಗಿವೆ ಎಂದರು.

ಕಾರ್ಮಿಕರ ಪರಿಷತ್ತು ಜಿಲ್ಲಾಧ್ಯಕ್ಷ ಅಂಜಿನಪ್ಪ ಮಾತನಾಡಿ, ರಾಜ್ಯದಲ್ಲಿ ನಕಲಿ ಕಾರ್ಮಿಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾಕಷ್ಟು ಬಾರಿ ಹೋರಾಟ ಮಾಡಿ ಮನವಿ ಸಲ್ಲಿಸಿದ್ದರೂ, ಪ್ರಯೋಜನಕ್ಕೆ ಬಾರದೇ, ನಕಲಿ ಕಾರ್ಮಿಕರ ಹೆಸರಿನಲ್ಲಿ ನೈಜ ಕಾರ್ಮಿಕರ ಸವಲತ್ತುಗಳನ್ನು ತಡೆಹಿಡಿದು ವಜಾ ಮಾಡುವುದು, ಮಕ್ಕಳ ಶೈಕ್ಷಣಿಕ ಧನಸಹಾಯ ಕಡಿತಗೊಳಿಸಿರುವುದು, ಕಾರ್ಮಿಕ ಸಂಘಟನೆಗಳ ಜೊತೆ ಮಾತುಕತೆ ನಡೆಸದೇ, ಏಕಪಕ್ಷೀಯ ತೀರ್ಮಾನ ಮಾಡುತ್ತಿರುವುದು, ಹೀಗೆ ಕಾರ್ಮಿಕ ವಿರೋಧಿ ನೀತಿಯನ್ನು ಸರ್ಕಾರ ಅನುಸರಿಸುತ್ತದೆ ಎಂದು ದೂರಿದರು.

ಎಐಟಿಯುಸಿ ಸಂಘಟನೆಯ ಬಸವರಾಜ ಸಂಶಿ ಮಾತನಾಡಿ, ಹಳೆಯ ಬೇಡಿಕೆಗಳನ್ನು ತಮ್ಮ ಹಾಗೂ ಕಾರ್ಮಿಕ ಮಂತ್ರಿಗಳ ಮಧ್ಯೆ ಸಭೆ ನಡೆಸಿ, ಇತ್ಯರ್ಥ ಪಡಿಸಬೇಕೆಂದು ಒತ್ತಾಯಿಸಲು, ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಮನ್ವಯ ಸಮಿತಿ ತೀರ್ಮಾನಿಸಿದೆ ಎಂದರು.ನಾಗರಾಜ ಇಟಿಗಿ, ಪೀರಾವಲಿ, ಅನ್ವರ್‌ಸಾಬ್‌, ಚಮನ್‌ಸಾಬ್‌, ಹಾಲಯ್ಯ, ಎರ್ರಿಸ್ವಾಮಿ, ಕೆ. ದ್ಯಾಮಪ್ಪ, ಗೀತಮ್ಮ, ಸಿದ್ದರಾಮಪ್ಪ, ಕೆ.ಆನಂದ, ಡಿ.ಶಿವಕುಮಾರ, ಶಿವಣ್ಣ, ತಾಯಪ್ಪ ಸೇರಿದಂತೆ ಇತರರು ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.

ಬೇಡಿಕೆಗಳು

* ಕಾರ್ಮಿಕರಿಗೆ ಅವಶ್ಯಕತೆಯಿಲ್ಲದ ಕಿಟ್‌ಗಳ ವಿತರಣೆ ತಕ್ಷಣದಿಂದ ನಿಲ್ಲಿಸಬೇಕು. ಕರ್ನಾಟಕ ಹೈಕೋರ್ಟ್ ನೀಡಿರುವ ಕಿಟ್‌ಗಳ ವಿತರಣೆಯ ತಡೆಯಾಜ್ಞೆ ಸರ್ಕಾರ ಚಾಚೂ ತಪ್ಪದೇ ಪಾಲಿಸಬೇಕು.* ಈ ಹಿಂದೆ ಇದ್ದ ಶೈಕ್ಷಣಿಕ ಧನಸಹಾಯವನ್ನು ಮುಂದುವರಿಸುವುದು ಹಾಗೂ ಹೈಕೋರ್ಟ್ ಆದೇಶದಂತೆ ಬಾಕಿ ಇರುವ ಎಲ್ಲ ವಿದ್ಯಾರ್ಥಿಗಳಿಗೆ ಈ ಹಿಂದಿನ ರೀತಿಯಲ್ಲಿ ಶೈಕ್ಷಣಿಕ ಧನಸಹಾಯವನ್ನು ನೀಡುವುದು.

* ನಕಲಿ ಕಾರ್ಮಿಕರ ಹೆಸರಿನಲ್ಲಿ ನೈಜ ಕಾರ್ಮಿಕರನ್ನು ತಿರಸ್ಕರಿಸುವುದನ್ನು ನಿಲ್ಲಿಸಬೇಕು ಮತ್ತು ಮಂಡಳಿಯ ಏಕಪಕ್ಷೀಯ ತೀರ್ಮಾನವನ್ನು ಕೈಬಿಡಬೇಕು.

* ಸಂಘಟನೆಗಳ ಜೊತೆ ಮಾತುಕತೆ ನಡೆಸಿ ತ್ರಿಪಕ್ಷೀಯ ತೀರ್ಮಾನಕ್ಕೆ ಬರಬೇಕು ಹಾಗೂ ಬಾಕಿ ಇರುವ ಸೌಲಭ್ಯಗಳ ಅರ್ಜಿಗಳನ್ನು ಬೇಗ ವಿಲೇವಾರಿ ಮಾಡಬೇಕು ಸೇರಿ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಲಾಯಿತು.

Share this article