ಬರ ಪರಿಹಾರ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : May 17, 2024 12:30 AM

ಸಾರಾಂಶ

ರಾಜ್ಯ ಸರ್ಕಾರ ಕೂಡಲೇ ಬರ ಪರಿಹಾರ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಗುರುವಾರ ನಗರದ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿದರು.

ರಾಣಿಬೆನ್ನೂರು: ರಾಜ್ಯ ಸರ್ಕಾರ ಕೂಡಲೇ ಬರ ಪರಿಹಾರ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಗುರುವಾರ ನಗರದ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ ಹಾಗೂ ಪ್ರಸ್ತುತ ವರ್ಷ ಅನಾವೃಷ್ಟಿಯಿಂದಾಗಿ ರೈತರು ಎರಡೆರಡು ಬಾರಿ ಬಿತ್ತನೆ ಮಾಡಿ ಸಾಲದ ಸೂಲಕ್ಕೆ ಸಿಲುಕಿ ಕೃಷಿಯಿಂದ ಲಾಭವಾಗದೆ ಮತ್ತು ಕೃಷಿ ಮಾಡಲು ಸಾಧ್ಯವಾಗದೆ ಅತ್ಮಹತ್ಯೆಯಂತಹ ದಾರಿ ಹಿಡಿದಿದ್ದಾರೆ.ರಾಜ್ಯದಲ್ಲಿಯೇ ಅತೀ ಹೆಚ್ಚು ರೈತ ಆತ್ಮಹತ್ಯೆಗಳು ಹಾವೇರಿ ಜಿಲ್ಲೆಯಲ್ಲಿಯೇ ನಡೆದಿವೆ. ನಮ್ಮ ಸಂಘಟನೆಯ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಮಣಿದು ಸರ್ಕಾರ ರಾಣಿಬೆನ್ನೂರ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ಸುಮಾರು ತಿಂಗಳುಗಳು ಗತಿಸಿದರೂ ನಮ್ಮನ್ನಾಳುತ್ತಿರುವ ಸರ್ಕಾರಗಳು ಬರಗಾಲದ ಕಡೆ ಗಮನ ಹರಿಸದೇ ಚುನಾವಣೆ ಗುಂಗಿನಲ್ಲಿ ಕಳೆದುಹೋಗಿವೆ. ಇತ್ತೀಚೆಗೆ ರಾಜ್ಯ ಸರ್ಕಾರ ಕಾಟಾಚಾರಕ್ಕೆ ೨ ಸಾವಿರ ರು. ಬರಪರಿಹಾರ ಎಂದು ಕೆಲವೇ ಕೆಲವು ರೈತರ ಖಾತೆಗೆ ಹಾಕಿ ಕೇಂದ್ರದ ಕಡೆ ಬೆರಳು ತೋರಿಸುತ್ತಿದೆ. ಅಲ್ಲದೆ ಕೇಂದ್ರ ಸರ್ಕಾರದಿಂದ ಪರಿಹಾರವಾಗಿ ಪ್ರತಿ ಹೆಕ್ಟೇರ್‌ಗೆ 8500 ರು. ಬಿಡುಗಡೆ ಮಾಡಿಸಿ ಈ ಹಿಂದೆ ರಾಜ್ಯ ಸರ್ಕಾರದಿಂದ ಹಾಕಿದ 2 ಸಾವಿರ ರು. ಕಟ್ ಮಾಡಿ ಪ್ರತಿ ಹೆಕ್ಟೇರ್‌ಗೆ 6,500 ರು.ಗಳಂತೆ ರೈತರ ಖಾತೆಗೆ ಹಾಕುತ್ತಿದೆ. ಪ್ರಸ್ತುತ ಬರಗಾಲದ ಸನ್ನಿವೇಶದಲ್ಲಿ ಕೃಷಿ ಮಾಡುವುದು ದುಸ್ತರವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಎಸ್.ಡಿ.ಆರ್.ಎಫ್ ನಿಧಿಯಿಂದ 8,500 ರು. ಪ್ರತಿ ಎಕರೆಗೆ ಕೊಡಬೇಕು ಎಂದು ಒತ್ತಾಯಿಸಿದರು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರತರನಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ತಹಸೀಲ್ದಾರ್ ಸುರೇಶಕುಮಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ರೈತರಾದ ಸುರೇಶಪ್ಪ ಹೊನ್ನಪ್ಪಳವರ, ಫಕ್ಕೀರಸಾಬ ದೊಡ್ಡಮನಿ, ಸುರೇಶ ದೂಳಿಹೊಳೆ, ಸಿದ್ದಪ್ಪ ಕುಪ್ಪೇಲೂರ, ಕಸಬಸಪ್ಪ ಅಗಸಿಬಾಗಿಲ, ಬಸವರಾಜ ಕಡೂರ, ಮಲ್ಲಪ್ಪ ಗೌಡ್ರ, ಪ್ರಕಾಶ ಹಳಿಯಾಳದವರ, ಪಕ್ಕೀರಪ್ಪ ಬೂದಗಟ್ಟಿ, ಲೋಕೇಶ ಸುತಾರ, ನಾಗಪ್ಪ ಎಲಿಗಾರ ಮತ್ತಿತರರು ಪಾಲ್ಗೊಂಡಿದ್ದರು.

Share this article