ಕೊಪ್ಪಳ: ಕೊಪ್ಪಳದ ಕುವೆಂಪು ನಗರ ಸರ್ಕಾರಿ ಶಾಲೆಯನ್ನು 8, 9 ಮತ್ತು 10ನೇ ತರಗತಿವರೆಗೆ ಉನ್ನತೀಕರಿಸುವಂತೆ ಆಗ್ರಹಿಸಿ ಪಾಲಕರು, ಸಾರ್ವಜನಿಕರು ಮುಖಂಡರು ಶಾಲೆ ಎದರುಗಡೆ ಬುಧವಾರ ಧರಣಿ ನಡೆಸಿದರು.
ಕುವೆಂಪು ನಗರದಲ್ಲಿ 7ನೇ ತರಗತಿವರೆಗೆ ಮಾತ್ರ ಶಿಕ್ಷಣದ ವ್ಯವಸ್ಥೆ ಇರುವುದರಿಂದ, 8ನೇ ತರಗತಿಯಿಂದ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮಕ್ಕಳು ನಗರದ ಗಡಿಯಾರ ಕಂಬ ಸಮೀಪದ ಸರ್ಕಾರಿ ಶಾಲೆಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಮಾರ್ಗದಲ್ಲಿ ವಾಹನ ಸಂಚಾರ ದಟ್ಟವಾಗಿರುವುದರಿಂದ ಮಕ್ಕಳ ಸುರಕ್ಷತೆ ಬಗ್ಗೆ ಪಾಲಕರು ತೀವ್ರ ಆತಂಕ ವ್ಯಕ್ತಪಡಿಸಿದರು. ಅಲ್ಲದೆ ಶಾಲೆಗೆ ಹೋಗುವ ದಾರಿಯಲ್ಲಿ ಸ್ಮಶಾನದ ಪ್ರದೇಶವನ್ನು ದಾಟಿಕೊಂಡು ಹೋಗಬೇಕಾಗಿರುವುದು ಕೂಡ ಪಾಲಕರಲ್ಲಿ ಆತಂಕ ಹೆಚ್ಚಿಸಿದೆ.
ಪ್ರತಿಭಟನಾಕಾರರ ಪ್ರಕಾರ, ಈ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆ ಉನ್ನತೀಕರಣವಾಗದ ಕಾರಣ ಕೆಲ ಮಕ್ಕಳು ಶಾಲೆಗೆ ಬರದೇ ವಿದ್ಯಾಭ್ಯಾಸದಿಂದ ದೂರ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.ಶಾಲೆಯನ್ನು 8, 9 ಮತ್ತು 10ನೇ ತರಗತಿವರೆಗೆ ಉನ್ನತೀಕರಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಇಲಾಖೆ (ಡಿಡಿಪಿಐ) ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಇದ್ದರು.