ಮತದಾರರ ಪಟ್ಟಿಯಲ್ಲಿ ತಪ್ಪು, ನಕಲು ಹೆಸರುಗಳು ಹಾಗೂ ಮೃತರ ವಿವರಗಳಿಗೆ ಕತ್ತರಿ ಹಾಕಿ, ನಿಖರ ಹಾಗೂ ಪಾರದರ್ಶಕ ಮತದಾರರ ಪಟ್ಟಿ ಸಿದ್ಧಗೊಳಿಸುವ ಉದ್ದೇಶದಿಂದ ಭಾರತ ಚುನಾವಣಾ ಆಯೋಗ ಕೈಗೊಂಡಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಅಭಿಯಾನ ತಾಲೂಕಿನಲ್ಲಿ ಭರದಿಂದ ಸಾಗಿದ್ದು, ಈಗಾಗಲೇ ಶೇ.90 ರಷ್ಟು ಗಣತಿ ನಮೂನೆಗಳ ವಿತರಣೆ ಪೂರ್ಣಗೊಂಡಿದೆ.

ಸತ್ತವರ ಹೆಸರು ಔಟ್, ಹೊಸ ಮತದಾರರಿಗೆ ಎಂಟ್ರಿ

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಂಕೋಲಾ ಫುಲ್ ಸ್ಪೀಡ್‌ರಾಘು ಕಾಕರಮಠ

ಕನ್ನಡಪ್ರಭ ವಾರ್ತೆ ಅಂಕೋಲಾ

ಮತದಾರರ ಪಟ್ಟಿಯಲ್ಲಿ ತಪ್ಪು, ನಕಲು ಹೆಸರುಗಳು ಹಾಗೂ ಮೃತರ ವಿವರಗಳಿಗೆ ಕತ್ತರಿ ಹಾಕಿ, ನಿಖರ ಹಾಗೂ ಪಾರದರ್ಶಕ ಮತದಾರರ ಪಟ್ಟಿ ಸಿದ್ಧಗೊಳಿಸುವ ಉದ್ದೇಶದಿಂದ ಭಾರತ ಚುನಾವಣಾ ಆಯೋಗ ಕೈಗೊಂಡಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಅಭಿಯಾನ ತಾಲೂಕಿನಲ್ಲಿ ಭರದಿಂದ ಸಾಗಿದ್ದು, ಈಗಾಗಲೇ ಶೇ.90 ರಷ್ಟು ಗಣತಿ ನಮೂನೆಗಳ ವಿತರಣೆ ಪೂರ್ಣಗೊಂಡಿದೆ.

ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅಂಕೋಲಾ ತಾಲೂಕಿನ 111 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒಗಳು) ಮನೆ ಮನೆಗೆ ತೆರಳಿ ಮತದಾರರ ವಿವರ ಪರಿಶೀಲಿಸುವುದರೊಂದಿಗೆ ಗಣತಿ ನಮೂನೆಗಳನ್ನು ವಿತರಿಸುತ್ತಿದ್ದಾರೆ. ಜೂ. 30ರಿಂದ ಆರಂಭಗೊಂಡಿರುವ ಈ ವಿಶೇಷ ಅಭಿಯಾನ ಜು. 29ರವರೆಗೆ ನಡೆಯಲಿದ್ದು, ಮತದಾರರು ನಮೂನೆಗಳನ್ನು ಭರ್ತಿ ಮಾಡಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ತಾಲೂಕಿನಲ್ಲಿ ಒಟ್ಟು 96555 ಮತದಾರರಿದ್ದು, ಅದರಲ್ಲಿ 81,053 ಗಣತಿ ನಮೂನೆಗಳನ್ನು ಈಗಾಗಲೇ ವಿತರಿಸಲಾಗಿದ್ದು, ಅವುಗಳ ಮಾಹಿತಿಯನ್ನು ಡಿಜಿಟಲೀಕರಣಗೊಳಿಸುವ ಕಾರ್ಯವೂ ನಡೆಯುತ್ತಿದೆ. ಆರಂಭದಲ್ಲಿ ಬಿಎಲ್ಒ ಆ್ಯಪ್‌ನ ಸರ್ವರ್ ಸಮಸ್ಯೆ ಕಂಡುಬಂದಿದ್ದರೂ, ಇದೀಗ ಅದು ಸಂಪೂರ್ಣವಾಗಿ ಪರಿಹಾರಗೊಂಡಿದ್ದು ಕಾರ್ಯ ಮತ್ತಷ್ಟು ವೇಗ ಪಡೆದುಕೊಂಡಿದೆ.

ಪರಿಶೀಲನೆ ವೇಳೆ ಕೆಲ ಮತದಾರರು ಬೇರೆಡೆಗೆ ಸ್ಥಳಾಂತರಗೊಂಡಿರುವುದು, ಕೆಲವರು ಮೃತಪಟ್ಟಿರುವುದು ಬಿಎಲ್ಒಗಳ ಗಮನಕ್ಕೆ ಬಂದಿದೆ. ಇಂತಹ ಮಾಹಿತಿಯನ್ನು ದಾಖಲಿಸಿ ಮುಂದಿನ ಪರಿಶೀಲನೆಗಾಗಿ ಕಳುಹಿಸಲಾಗುತ್ತಿದೆ. ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ತಪ್ಪುಗಳಿಲ್ಲದ, ಪಾರದರ್ಶಕ ಹಾಗೂ ವಿಶ್ವಾಸಾರ್ಹ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದು, ಸಾರ್ವಜನಿಕರು ಸಹ ಅಗತ್ಯ ದಾಖಲೆಗಳೊಂದಿಗೆ ಸಹಕರಿಸುವಂತೆ ಚುನಾವಣಾ ಇಲಾಖೆ ಮನವಿ ಮಾಡಿದೆ.ಮತದಾರರ ಪಟ್ಟಿಯ ಪಾರದರ್ಶಕತೆ ಕಾಯ್ದುಕೊಳ್ಳುವುದು ಹಾಗೂ ಯಾವುದೇ ಲೋಪದೋಷಗಳಿಲ್ಲದ ನಿಖರ ಪಟ್ಟಿಯನ್ನು ಸಿದ್ಧಪಡಿಸುವುದೇ ವಿಶೇಷ ಸಮಗ್ರ ಪರಿಷ್ಕರಣೆಯ ಮುಖ್ಯ ಉದ್ದೇಶವಾಗಿದೆ. ಈ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು ಮತ್ತು ಬಿಎಲ್ಒಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಹಸೀಲ್ದಾರ ಎನ್.ಎಫ್. ನರೋನಾ ತಿಳಿಸಿದ್ದಾರೆ.

ಆರಂಭದಲ್ಲಿ ಬಿಎಲ್ಒ ಆ್ಯಪ್‌ಗೆ ಸರ್ವರ್ ಸಮಸ್ಯೆ ಎದುರಾಗಿತ್ತು. ಈಗ ಅದು ನಿವಾರಣೆಯಾಗಿದ್ದು, ಶೇ.90ರಷ್ಟು ಅರ್ಜಿ ವಿತರಣೆ ಪೂರ್ಣಗೊಂಡಿದೆ. ಬಿಎಲ್ಒಗಳು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುತ್ತಾರೆ ಚುನಾವಣಾ ವಿಭಾಗ ವಿಷಯ ನಿರ್ವಾಹಕಿ ಶ್ರೀನಿಧಿ ನಾಯ್ಕ