ಡಂಬಳ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನಿರ್ಮಾಣ ಹಂತದಲ್ಲಿರುವ ಗ್ರಿಡ್ ಕಾಮಗಾರಿಗೆ ಕಂಪನಿಯವರು ಮಾಡಿಕೊಂಡಿರುವ ಒಪ್ಪಂದದಂತೆ ಪರಿಹಾರ ನೀಡದ ಹಿನ್ನೆಲೆ ಬುಧವಾರ ರೈತ ಸಂಘದ ನೇತೃತ್ವದಲ್ಲಿ ರೈತರು ತಕ್ಷಣ ಪರಿಹಾರ ನೀಡುವಂತೆ ಆಗ್ರಹಿಸಿ ಕಾಮಗಾರಿ ಬಂದ್ ಮಾಡಿ ಹೋರಾಟ ಮುಂದುವರಿಸಿದರು.

ಡಂಬಳ ಹೋಬಳಿ ಹೈತಾಪುರ ಗ್ರಾಮದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ(ಕೆಪಿಟಿಸಿಎಲ್) ನಿರ್ಮಾಣ ಹಂತದಲ್ಲಿರುವ ಮುಂದೆ ಬುಧವಾರ ಮುಂದುವರಿದ ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೀರನಗೌಡ ಪಾಟೀಲ ಮಾತನಾಡಿ, ಇಲಾಖೆಯ ಅಧಿಕಾರಿಗಳನ್ನು ರೈತರು ಭಿಕ್ಷೆ ಕೇಳುತ್ತಿಲ್ಲ. ಬಂಗಾರದಂತ ಜಮೀನು ನೀಡಿದ್ದಾರೆ. ಇಲಾಖೆಯ ಅಧಿಕಾರಿಗಳಿಗೆ ಹಾಗೂ ತಾಲೂಕು ಆಡಳಿತಕ್ಕೆ ರೈತರ ಹಿತಾಸಕ್ತಿಗಿಂತ ಇಲಾಖೆಯ ಹಿತಾಸಕ್ತಿ ಮುಖ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರಾದ ಶೇಖಪ್ಪ ಯಾವಗಲ್, ನಾಗಪ್ಪ ಚುಂಗಿನ ಮಾತನಾಡಿ, ನಮಗೆ ಪರಿಹಾರ ದೊರೆಯುವ ತನಕ ಪ್ರತಿಭಟನೆ ಮುಂದುವರಿಸುತ್ತೇವೆ. ತಾಲೂಕು ಆಡಳಿತ ನಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೋರಾಟದಲ್ಲಿ ಅವಘಡವಾದರೆ ಇಲಾಖೆಯ ಅಧಿಕಾರಿಗಳೆ ನೇರ ಹೊಣೆ. ನಮ್ಮ ತಾಳ್ಮೆಗೂ ಮಿತಿ ಇದೆ. ನಮಗೆ ಪರಿಹಾರ ಸಿಗುವ ತನಕ ಕಾಮಗಾರಿ ಬಂದ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಬುಧವಾರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನಿಯಮಿತ ಕಾರ್ಯನಿರ್ವಾಹಕ ಎಂಜಿನಿಯರ ಯಶವಂತ ಜಾಲಿಕಾಯಿ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿ, ಶೀಘ್ರದಲ್ಲೆ ಪರಿಹಾರವನ್ನು ಕೊಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಕಾಮಗಾರಿಯನ್ನು ಬಂದ್ ಮಾಡುತ್ತೇವೆ. ನಮಗೆ ಸ್ವಲ್ಪ ಕಾಲಾವಕಾಶ ನೀಡಬೇಕೆಂದು ರೈತರನ್ನು ಮನವೊಲಿಸುವ ಪ್ರಯತ್ನ ವಿಫಲವಾಯಿತು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಶಿವಾನಂದ ಇಟಗಿ, ರೈತರಾದ ಮುತ್ತಪ್ಪ ಗೋಡಿ, ಪ್ರಭು ಕೊರ್ಲಹಳ್ಳಿ, ಹನುಮಪ್ಪ ಚುಂಗಿನ, ಶರಣಪ್ಪ ಕೊರ್ಲಹಳ್ಳಿ, ಮಂಜಪ್ಪ ಹಾರೂಗೇರಿ, ಮುತ್ತಪ್ಪ ಕೊರ್ಲಹಳ್ಳಿ, ದೇವೆಂದ್ರಗೌಡ ಪಾಟೀಲ, ಬಸವರಾಜ ಆನಿಯವರು, ಶಿವಶಂಕರಪ್ಪ ಮುದಿಯಜ್ಜನವರ, ಸಿದ್ದಪ್ಪ ಮಟ್ಟಿ, ಬಸವರಾಜ ಸೂಗಿ, ಶೇಖಪ್ಪ ಮಟ್ಟಿ, ಚಿದಾನಂದ ಪಾಟೀಲ, ಮಲ್ಲಪ್ಪ ಮಲ್ಲಪ್ಪನವರ, ಹನುಮಪ್ಪ ಪೂಜಾರ, ರಾಮಣ್ಣ ರೋಣದ, ಮಹಾಂತೇಶ ಚುಂಗಿನ, ಹಾಲಪ್ಪ ಚುಂಗಿನ, ಶಿವಕುಮಾರ ಲಕ್ಕುಂಡಿ, ಕನಕಪ್ಪ ನಾಡಗೌಡ್ರ, ಹೊನ್ನಪ್ಪ ಪೂಜಾರ ಸೇರಿದಂತೆ ಮೇವುಂಡಿ ಹಾಗೂ ಹೈತಾಪೂರ ಗ್ರಾಮದ ರೈತರು ಭಾಗವಹಿಸಿದ್ದರು.