ಶಿರಹಟ್ಟಿ: ಸರ್ಕಾರ ಜಾರಿಗೊಳಿಸುತ್ತಿರುವ ಒಳಮೀಸಲಾತಿಯಲ್ಲಿ ಬಂಜಾರ ಸಮಾಜಕ್ಕೆ ಅನ್ಯಾಯವಾಗುತ್ತಿದೆ. ಒಳಮೀಸಲಾತಿ ಜಾರಿಯ ಸಂದರ್ಭದಲ್ಲಿ ಬಂಜಾರ ಸಮಾಜಕ್ಕೆ ಅನ್ಯಾಯವಾಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಎಚ್ಚರಿಸಿದರು.ಜಿಲ್ಲಾ ಬಂಜಾರ ಸಮಾಜದ ವತಿಯಿಂದ ತಾಲೂಕಿನ ವರವಿ ಮೌನೇಶ್ವರ ಮಠದ ಸಭಾ ಭವನದಲ್ಲಿ ಏರ್ಪಡಿಸಿದ್ದ ದಿಕ್ಸೂಚಿ ಬಂಜಾರ, ನಮ್ಮ ಮೀಸಲಾತಿ ನಮ್ಮ ಹಕ್ಕು ಚಿಂತನಾ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಕ್ಷಣವೇ ಈ ಅನ್ಯಾಯವನ್ನು ಸರಿಪಡಿಸದಿದ್ದರೆ ರಾಜ್ಯಾದ್ಯಂತ ಕಾಂಗ್ರೆಸ್ ಹಠಾವೋ, ತಾಂಡಾ ಬಚಾವೋ ಘೋಷಣೆಯಡಿ ವ್ಯಾಪಕ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಒಳಮೀಸಲಾತಿ ಹಂಚಿಕೆ ವೇಳೆ ಬಂಜಾರ ಸಮಾಜದ ಜನಸಂಖ್ಯೆ, ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆ ಸೇರಿದಂತೆ ವಾಸ್ತವಾಂಶಗಳನ್ನು ಪರಿಗಣಿಸದೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರೋಪಿಸಿದರು. ಇದರಿಂದ ಸಮಾಜದ ಯುವಕರಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ತೀವ್ರ ಅನ್ಯಾಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಮಾಜಿ ಸಂಸದ ಡಾ. ಉಮೇಶ ಜಾಧವ, ಔರಾದ ಶಾಸಕ ಪ್ರಭು ಚವ್ಹಾಣ ಮಾತನಾಡಿ, ಬಂಜಾರ ಸಮಾಜವು ಹಲವು ದಶಕಗಳಿಂದ ಶಿಕ್ಷಣ, ಉದ್ಯೋಗ, ರಾಜಕೀಯ ಪ್ರಾತಿನಿಧ್ಯ ಹಾಗೂ ಮೂಲ ಸೌಲಭ್ಯಗಳಿಗಾಗಿ ಹೋರಾಟ ನಡೆಸುತ್ತಾ ಬಂದಿದೆ. ಇಂತಹ ಸಂದರ್ಭದಲ್ಲಿ ಒಳಮೀಸಲಾತಿ ಜಾರಿಯಿಂದ ಈಗಾಗಲೇ ಹಿಂದುಳಿದಿರುವ ಸಮಾಜದ ವಿದ್ಯಾರ್ಥಿಗಳು, ಯುವಕರು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಮೀಸಲಾತಿಯ ಅವಕಾಶಗಳು ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದರು.
ಸಾಮಾಜಿಕ ನ್ಯಾಯದ ಉದ್ದೇಶದಿಂದ ಜಾರಿಗೊಳಿಸಲಾಗುವ ಯಾವುದೇ ನೀತಿಯು ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು. ಬಂಜಾರ ಸಮಾಜದ ನೈಜ ಸಾಮಾಜಿಕ ಹಾಗೂ ಶೈಕ್ಷಣಿಕ ಹಿಂದುಳಿದ ಸ್ಥಿತಿಯನ್ನು ಪರಿಗಣಿಸಿ ನ್ಯಾಯಸಮ್ಮತ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಹೂವಿನಹಡಗಲಿ ಶಾಸಕ ಕೃಷ್ಣನಾಯ್ಕ, ಮುಖಂಡರಾದ ಬಸವರಾಜ ನಾಯಕ, ಮಣಿಕಂಠ ರಾಠೋಡ, ಲಿಂಬ್ಯಾ ನಾಯಕ, ರವಿ ಸಾವಕಾರ, ಭೀಮಸಿಂಗ್ ರಾಠೋಡ, ಸುಭಾಸ ಗುಡಿಮನಿ ಮಾತನಾಡಿದರು. ಜಾನು ಲಮಾಣಿ, ಮಲ್ಲೇಶ ಲಮಾಣಿ, ತಿಪ್ಪಣ್ಣ ಲಮಾಣಿ, ಮಂಜು ನಾಯಕ, ಅನಿಲ ಕಾರಬಾರಿ, ಟಿ.ಡಿ. ಲಮಾಣಿ, ಮಾನು ನಾಯಕ, ಪರಮೇಶ ಲಮಾಣಿ, ಆನಂದ ನಾಯಕ, ಮುತ್ತು ಲಮಾಣಿ ಸೇರಿ ಅನೇಕರು ಕಾರ್ಯಕ್ರಮದಲ್ಲಿ ಇದ್ದರು.