ಶಿಗ್ಗಾಂವಿ: ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಮತ್ತು ವಿದ್ಯಾರ್ಥಿಗಳ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಶಿಗ್ಗಾಂವಿ ತಾಲೂಕು ಘಟಕದ ವತಿಯಿಂದ ತಹಸೀಲ್ದಾರ್‌ ಕಚೇರಿ ಮುಂದೆ ಪ್ರತಿಭಟಿಸಿ, ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಅರ್ಪಿಸಲಾಯಿತು.

ತಾಲೂಕು ಘಟಕದ ಅಧ್ಯಕ್ಷ ದೇವರಾಜ ಕರೂರ ಮಾತನಾಡಿ, ಸರ್ಕಾರಿ ಶಾಲೆಗಳ ಮಕ್ಕಳಿಗೆ ಮತ್ತು ನೌಕರರಿಗೆ ನೀಡಲಾಗುತ್ತಿರುವ ಸೌಲಭ್ಯಗಳನ್ನು ಅನುದಾನಿತ ಶಾಲಾ ಮಕ್ಕಳಿಗೆ ಹಾಗೂ ನೌಕರರಿಗೆ ನೀಡದೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇತ್ತೀಚೆಗೆ ಸರ್ಕಾರವು ೨೦೦೬ರ ಮೊದಲು ನೇಮಕಾತಿ ಅಧಿಸೂಚನೆ ಹೊರಡಿಸಿ, ನಂತರ ನೇಮಕಗೊಂಡ ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಸೌಲಭ್ಯ ಜಾರಿಗೊಳಿಸಿದೆ. ಅದೇ ನಿಯಮದಂತೆ ಅನುದಾನಿತ ಶಾಲಾ ನೌಕರರಿಗೂ ಹಳೇ ಪಿಂಚಣಿಯನ್ನು ವಿಸ್ತರಿಸಬೇಕು ಎಂದು ಸಂಘವು ಒತ್ತಾಯಿಸುತ್ತಿದೆ ಎಂದರು.

ಸಂಘದ ಕಾರ್ಯದರ್ಶಿ ದಯಾನಂದ ಸೂರಗೊಂಡ ಮಾತನಾಡಿ, ರಾಜ್ಯದಲ್ಲಿ ಶಿಕ್ಷಣ ಪ್ರೇಮಿಗಳು ಮಕ್ಕಳ ಭವಿಷ್ಯಕ್ಕಾಗಿ ಆರಂಭಿಸಿದ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರ ಅನುದಾನಕ್ಕೆ ಒಳಪಡಿಸಿತು. ಆದರೆ ಸರ್ಕಾರದ ಕೆಲ ವ್ಯತಿರಿಕ್ತ ಆದೇಶಗಳಿಂದಾಗಿ ಇಂದು ಸಿಬ್ಬಂದಿ ವರ್ಗದವರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ೨೦೦೬ರ ನಂತರ ನೇಮಕವಾದ ಅನುದಾನಿತ ಶಾಲಾ ನೌಕರರಿಗೆ ಪಿಂಚಣಿ ಸೌಲಭ್ಯ ರದ್ದುಗೊಳಿಸಿರುವುದರಿಂದ ನಿವೃತ್ತ ನೌಕರರ ಬದುಕು ಅಯೋಮಯವಾಗಿದೆ. ಅವರ ಕುಟುಂಬಗಳು ಬೀದಿಪಾಲಾಗಿವೆ ಎಂದರು.

ರಾಜ್ಯಾದ್ಯಂತ ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ನಿರಂತರ ಹೋರಾಟ ಮಾಡಿದರೂ ಸರ್ಕಾರ ನಮ್ಮ ಬೇಡಿಕೆಗಳ ಬಗ್ಗೆ ಮೌನ ವಹಿಸಿದೆ. ಈಗಲಾದರೂ ಮುಖ್ಯಮಂತ್ರಿಗಳು ಈ ಗಂಭೀರ ಸಮಸ್ಯೆಗಳನ್ನು ಆಲಿಸಿ ನ್ಯಾಯ ಒದಗಿಸಬೇಕು, ಇಲ್ಲದಿದ್ದರೆ ಸಂಘವು ಉಗ್ರ ಹೋರಾಟದ ಹಾದಿ ತುಳಿಯುವುದು ಅನಿವಾರ್ಯವಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ಆರ್.ಎಫ್‌. ಹಳಿಯಾಳ, ಬಸವರಾಜ ಹೊಸಪೇಟಿ, ಎಂ.ಬಿ. ಉಮ್ಮಕಿ, ಸಿ.ಡಿ. ಗಜಕೋಶ, ಎ.ಎಸ್. ಪಾಟೀಲ, ರುದ್ರೇಶ ಹಳಿಯಾಳ, ಎನ್.ಸಿ. ಹೊನ್ನನಗೌಡ್ರ, ಮೀಸಿ, ವಲ್ಲಭ ರಿತ್ತಿಕೊಪ್ಪ, ವೀರೇಶ ಬಂಗಿ, ಕುರಬರ ಇತರರಿದ್ದರು. ಸಂಘದ ಪ್ರಮುಖ ಬೇಡಿಕೆಗಳು: ಹಳೇ ಪಿಂಚಣಿ ಸೌಲಭ್ಯ ಜಾರಿಯಾಗಬೇಕು, ಎನ್.ಪಿ.ಎಸ್. ಜಾರಿಯಾಗಬೇಕು, ಆರೋಗ್ಯ ಸಂಜೀವಿನಿ ವಿಸ್ತರಣೆಯಾಗಬೇಕು, ಸರ್ಕಾರಿ ಶಾಲೆಗಳಿಗೆ ಸಿಗುವ ಸೌಲಭ್ಯಗಳು ಸಿಗಬೇಕು, ಖಾಲಿ ಹುದ್ದೆಗಳನ್ನು ತುಂಬಬೇಕು.