ಕನ್ನಡಪ್ರಭ ವಾರ್ತೆ ಕಾರವಾರ
ತಾಲೂಕಿನ ಶಿರವಾಡ ಗ್ರಾಮದ ಬಂಗಾರಪ್ಪ ನಗರದಲ್ಲಿ ಏಕಾಏಕಿ ವಿದ್ಯುತ್ ವೋಲ್ಟೇಜ್‌ನಲ್ಲಿ ಭಾರಿ ಏರಿಳಿತ ಉಂಟಾದ ಪರಿಣಾಮವಾಗಿ, ಹತ್ತಾರು ಮನೆಗಳಲ್ಲಿದ್ದ ಬೆಲೆಬಾಳುವ ವಿದ್ಯುತ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳು ಶಾರ್ಟ್ ಸರ್ಕ್ಯೂಟ್‌ನಿಂದ ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.ಹಠಾತ್ ವೋಲ್ಟೇಜ್ ಏರಿಕೆಯಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ನಿವಾಸಿಗಳ ಮನೆಗಳಲ್ಲಿದ್ದ ಟಿವಿ, ಫ್ಯಾನ್, ಫ್ರಿಜ್, ಮೊಬೈಲ್ ಚಾರ್ಜರ್‌ಗಳು, ಮಿಕ್ಸರ್ ಸೇರಿದಂತೆ ದಿನಬಳಕೆಯ ನೂರಾರು ಬೆಲೆಬಾಳುವ ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟು ಭಸ್ಮವಾಗಿವೆ. ಇದರಿಂದಾಗಿ ಸ್ಥಳೀಯ ನಿವಾಸಿಗಳಿಗೆ ಒಟ್ಟಾರೆಯಾಗಿ ಲಕ್ಷಾಂತರ ರುಪಾಯಿ ಮೌಲ್ಯದ ಭಾರಿ ಆರ್ಥಿಕ ನಷ್ಟ ಉಂಟಾಗಿದೆ. ಏಕಾಏಕಿ ಮನೆಗಳ ವೈರಿಂಗ್‌ಗಳಲ್ಲಿ ಭಾರೀ ಶಬ್ದದೊಂದಿಗೆ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿದ್ದರಿಂದ ಕೆಲಕಾಲ ಸ್ಥಳದಲ್ಲಿ ತೀವ್ರ ಭಯದ ವಾತಾವರಣ ನಿರ್ಮಾಣವಾಗಿತ್ತಾದರೂ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸದೇ ದೊಡ್ಡ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದಂತಾಗಿದೆ.
ವಿದ್ಯುತ್ ಉಪಕರಣಗಳನ್ನು ಕಳೆದುಕೊಂಡು ಆರ್ಥಿಕವಾಗಿ ಕಷ್ಟಕ್ಕೆ ಸಿಲುಕಿರುವ ಬಂಗಾರಪ್ಪ ನಗರದ ನಿವಾಸಿಗಳು, ಘಟನೆಯ ಕುರಿತು ಸ್ಥಳೀಯ ಹೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹೆಸ್ಕಾಂ ತಾಂತ್ರಿಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಈ ಅವಘಡಕ್ಕೆ ಕಾರಣವಾದ ತಾಂತ್ರಿಕ ಲೋಪದೋಷಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು, ಹಾನಿಗೊಳಗಾದ ಬಡ ಕುಟುಂಬಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಮತ್ತು ಮುಂದಿನ ದಿನಗಳಲ್ಲಿ ಇಂತಹ ಗಂಭೀರ ದುರಂತಗಳು ಮರುಕಳಿಸದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.