- ಜಿಲ್ಲಾಧಿಕಾರಿ ಸ್ಪಂದನೆ । ಮೇ ಅಂತ್ಯದವರೆಗೂ ನೋಂದಣಿಗೆ ಅವಧಿ ವಿಸ್ತರಿಸಿ ಸರ್ಕಾರ ಆದೇಶ - - -
ಕನ್ನಡಪ್ರಭ ವಾರ್ತೆ ದಾವಣಗೆರೆಭತ್ತದ ಧಾರಣೆ ಕುಸಿದ ಹಿನ್ನೆಲೆ ಬೆಂಬಲ ಬೆಲೆಯಡಿ ಬತ್ತ ಖರೀದಿಸುವ ಜೊತೆಗೆ ಖರೀದಿಗಾಗಿ ನೋಂದಣಿ ಅವಧಿಯನ್ನು ವಿಸ್ತರಿಸುವಂತೆ ಒತ್ತಾಯಿಸಿ ಜಿಲ್ಲಾ ರೈತರ ಒಕ್ಕೂಟ ನೇತೃತ್ವದಲ್ಲಿ ನಗರದ ಜಿಲ್ಲಾಡಳಿತ ಭವನ ಆವರಣದಲ್ಲಿ ಭತ್ತ ಬೆಳೆಗಾರರು ಸೋಮವಾರ ಪ್ರತಿಭಟಿಸಿದರು.
ಒಕ್ಕೂಟದ ಮುಖಂಡರಾದ ಬಿ.ಎಂ. ಸತೀಶ ಕೊಳೇನಹಳ್ಳಿ, ತೇಜಸ್ವಿ ವಿ.ಪಟೇಲ್, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಲೋಕಿಕೆರೆ ನಾಗರಾಜ, ಬೆಳವನೂರು ಬಿ.ನಾಗೇಶ್ವರ ರಾವ್ ಇತರರ ನೇತೃತ್ವದಲ್ಲಿ ಬೆಂಬಲ ಬೆಲೆಯಡಿ ಭತ್ತ ಖರೀದಿಸಲು, ಖರೀದಿ ನೋಂದಣಿ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಭತ್ತ ಬೆಳೆಗಾರ ರೈತರು ಘೋಷಣೆ ಕೂಗಿದರು.ರೈತ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ ಮಾತನಾಡಿ, ಸಾಮಾನ್ಯವಾಗಿ ಭತ್ತದ ಕೊಯ್ಲು ಏಪ್ರಿಲ್ ಕೊನೆ ಅಥವಾ ಮೇ ತಿಂಗಳ ಮೊದಲ ವಾರದಲ್ಲಿ ಪ್ರಾರಂಭವಾಗುತ್ತದೆ. ಭತ್ತ ಖರೀದಿ ನೋಂದಣಿಗೆ ಕೊನೆಯ ಏ.25ರ ಒಳಗೆ ಸರ್ಕಾರ ನಿಗದಿಪಡಿಸಿದೆ. ಆದರೆ, ಆ ಅವಧಿಯಲ್ಲಿ ಯಾವುದೇ ರೈತರು ನೋಂದಣಿ ಮಾಡಿಸಿಲ್ಲ. ನೋಂದಣಿಗೆ ಕಡೇ ದಿನಾಂಕವನ್ನು ನಿಗದಿಪಡಿಸಿದ್ದು ಸಹ ಅವೈಜ್ಞಾನಿಕವಾಗಿದೆ. ಆದ್ದರಿಂದ ನೋಂದಣಿ ಅವಧಿ ಮೇ ಅಂತ್ಯದವರೆಗೆ ವಿಸ್ತರಿಸಬೇಕು. ನಾಳೆಯಿಂದಲೇ ನೋಂದಣಿ ಮತ್ತು ಭತ್ತ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಲೋಕಿಕೆರೆ ನಾಗರಾಜ, ಈಗಾಗಲೇ ಭತ್ತದ ಕಟಾವು ಪ್ರಕ್ರಿಯೆ ಜಿಲ್ಲಾದ್ಯಂತ ಶುರುವಾಗಿದೆ. ಮೇ ತಿಂಗಳ ಅಂತ್ಯದವರೆಗೂ ಕಟಾವು ಪ್ರಕ್ರಿಯೆ ನಡೆಯಲಿದೆ. ಈ ಹಿನ್ನೆಲೆ ಭತ್ತ ಖರೀದಿ ಪ್ರಕ್ರಿಯೆಯನ್ನು ಜಿಲ್ಲಾಡಳಿತ, ರಾಜ್ಯ ಸರ್ಕಾರವು ಸರಳವಾಗಿಸಬೇಕು. ಆಯಾ ಗ್ರಾಮ ಪಂಚಾಯಿತಿಗಳಲ್ಲಿ ನೋಂದಣಿ ಮಾಡಿಸುವ ವ್ಯವಸ್ಥೆ ಜಾರಿಗೆ ತರಬೇಕು. ಹೀಗೆ ಮಾಡುವ ಮೂಲಕ ರೈತರು ತಾಲೂಕು ಕೇಂದ್ರ, ಜಿಲ್ಲಾ ಕೇಂದ್ರಕ್ಕೆ ನೋಂದಣಿಗೆ ಬರುವುದು ತಪ್ಪಿಸಬೇಕು ಎಂದು ಮನವಿ ಮಾಡಿದರು.ಹಿರಿಯ ರೈತ ಮುಖಂಡ ತೇಜಸ್ವಿ ವಿ. ಪಟೇಲ್ ಮಾತನಾಡಿ, ರೈತರು ಭತ್ತ ನಾಟಿ ಮಾಡಿದ ದಿನವೇ ನೋಂದಣಿ ಮಾಡಿಸಿದಂತೆ ಎಂಬುದನ್ನು ಆಳುವ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಭತ್ತವನ್ನು ರೈತರಿಂದ ಖರೀದಿಸಿದ 24 ಗಂಟೆಯಲ್ಲೇ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಬೇಕು. ಬತ್ತ ಬೆಳೆದ ರೈತರು ಸಹ ಎಫ್‌ಎಕ್ಯೂ ಗುಣಮಟ್ಟವನ್ನು ಸಹ ಕಾಪಾಡಿಕೊಂಡು ಬರಬೇಕು. ಬೆಂಬಲ ಬೆಲೆಯಡಿ ತ್ವರಿತವಾಗಿ ಭತ್ತ ಖರೀದಿ ಪ್ರಕ್ರಿಯೆ ಜಿಲ್ಲಾಡಳಿತ ಆರಂಭಿಸಬೇಕು. ಕೇಂದ್ರದಲ್ಲಿ ರೈತರಿಗೆ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅನಂತರ ರೈತ ಮುಖಂಡರು, ಭತ್ತ ಬೆಳೆಗಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಭತ್ತ ಬೆಳೆಗಾರರ ಹಿತಕಾಯಲು ಜಿಲ್ಲಾಡಳಿತ ಬದ್ಧವಾಗಿದೆ. ಭತ್ತ ಖರೀದಿ ನೋಂದಣಿ ಅವಧಿ ವಿಸ್ತರಿಸಲು ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ. ಸಭೆಯಲ್ಲಿ ರೈತ ಮುಖಂಡರು, ಭತ್ತ ಬೆಳೆಗಾರರು ಎಲ್ಲ ವಿಚಾರವನ್ನೂ ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ಭರವಸೆ ನೀಡಿದರು.ಅನಂತರ ಸಭೆ ಮಧ್ಯೆಯೇ ಆಹಾರ ಮತ್ತು ನಾಗರೀಕ ಪೂರೈಕೆ ಪ್ರಧಾನ ಕಾರ್ಯದರ್ಶಿ ಮನೋಜ್ ಜೈನ್, ಆಯುಕ್ತೆ ಜೋತ್ನ್ಸಾ, ಕೃಷಿ ಸಚಿವ ಚಲುವರಾಯ ಸ್ವಾಮಿ ಆಪ್ತ ಕಾರ್ಯದರ್ಶಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರ ಆಪ್ತ ಕಾರ್ಯದರ್ಶಿ ಜೊತೆಗೆ ದೂರವಾಣಿ ಮೂಲಕ ಸಂಪರ್ಕಿಸಿ ಪರಿಸ್ಥಿತಿ ವಿವರಿಸಿದರು. ನಮ್ಮ ದಾವಣಗೆರೆ ಜಿಲ್ಲೆಯಲ್ಲಿ ಭತ್ತದ ಕೊಯ್ಲು ಶುರುವಾಗಿದೆ. ಅಲ್ಲದೇ, ಭತ್ತದ ಧಾರಣೆಯೂ ಇಳಿಮುಖವಾಗಿದೆ. ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಬೀದಿಯಲ್ಲಿ ಭತ್ತ ಸುರಿದು ರೈತರು ಪ್ರತಿಭಟಿಸುತ್ತಿದ್ದಾರೆ. ಈಗ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ, ಘೇರಾವ್ ಮಾಡಿದ್ದಾರೆಂಬ ವಿಚಾರವನ್ನು ಡಿಸಿ ಅವರು ಇಲಾಖೆ ಗಮನಕ್ಕೆ ತಂದರು. ಆ ಮೂಲಕ ರೈತರ ಬೇಡಿಕೆಗೆ ಸ್ಥಳದಲ್ಲೇ ಪರಿಹಾರವನ್ನೂ ಕಲ್ಪಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಪಾಲಿಕೆ ಮಾಜಿ ಸದಸ್ಯ ಸಂಕೋಳ್ ಚಂದ್ರಶೇಖರ, ಎಪಿಎಂಸಿ ಮಾಜಿ ಅಧ್ಯಕ್ಷ ಕುಂದುವಾಡ ಎಚ್.ಜಿ. ಗಣೇಶಪ್ಪ, ಅತ್ತಿಗೆರೆ ನಂದೀಶ, ಕಲ್ಪನಹಳ್ಳಿ ಸತೀಶ, ರೇವಣಸಿದ್ದಪ್ಪ, ಉಜ್ಜಪ್ಪ, ಆವರಗೆರೆ ಅಜ್ಜನಗೌಡಡ್ರು, ಗೋಪನಾಳ ಕೆಂಚವೀರಪ್ಪ, ಜಿಮ್ಮಿ ಹನುಮಂತಪ್ಪ, ಮಹೇಶಪ್ಪ, ಆರುಂಡಿ ಪುನೀತ್, ನಾಗರಸನಹಳ್ಳಿ ರುದ್ರಪ್ಪ, ವಿರೂಪಾಕ್ಷಪ್ಪ, ಜಡಗನಹಳ್ಳಿ ವಿರೂಪಾಕ್ಷಪ್ಪ, ಬಸವರಾಜಪ್ಪ, ಕಾರಿಗನೂರು ಮಂಜುನಾಥ ಪಟೇಲ್, ಗಂಗಾಧರಪ್ಪ, ಹದಡಿ ಜೆ.ಎನ್. ವೆಂಕಟೇಶ, ವಿಜಯ ಬಳೇಯರ ಇತರರು ಇದ್ದರು.- - -
(ಬಾಕ್ಸ್) * ಭತ್ತ ಖರೀದಿ, ನೋಂದಣಿ ಅವಧಿ ವಿಸ್ತರಣೆ- ಮೇ 31ರವರೆಗೆ ನೋಂದಣಿಗೆ ಅವಕಾಶ: ಡಿಸಿ ದಾವಣಗೆರೆ: ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ರೈತರಿಂದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಗೆ ನೋಂದಣಿ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷರಾದ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.
ಪ್ರತಿ ಕ್ವಿಂಟಲ್ ಭತ್ತಕ್ಕೆ ಎ. ಗ್ರೇಡ್‌ಗೆ ₹2320, ಸಾಮಾನ್ಯ ಭತ್ತಕ್ಕೆ ₹2300 ಬೆಂಬಲ ಬೆಲೆಯಡಿ ಖರೀದಿಸಲು ಜಗಳೂರು ತಾಲೂಕು ಹೊರತುಪಡಿಸಿ, ಉಳಿದ ಎಲ್ಲ ತಾಲೂಕುಗಳ ಎಲ್ಲ ಎ.ಪಿ.ಎಂ.ಸಿ.ಗಳಲ್ಲಿ ಬತ್ತ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರತಿ ರೈತರಿಂದ 25 ಕ್ವಿಂಟಲ್‌ನಿಂದ ಗರಿಷ್ಠ 50 ಕ್ವಿಂಟಲ್‍ವರೆಗೆ ಭತ್ತ ಖರೀದಿ ಮಾಡಲಾಗುವುದು ಎಂದು ಹೇಳಿದ್ದಾರೆ.- - -
-5ಕೆಡಿವಿಜಿ4: ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲೆಯ ರೈತರ ಒಕ್ಕೂಟ ನೇತೃತ್ವದಲ್ಲಿ ಭತ್ತ ಬೆಳೆಗಾರ ರೈತರು ಸೋಮವಾರ ಪ್ರತಿಭಟಿಸಿದರು. -5ಕೆಡಿವಿಜಿ5, 6: ದಾವಣಗೆರೆ ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ಸೋಮವಾರ ರೈತ ಮುಖಂಡರು, ಭತ್ತ ಬೆಳೆಗಾರರ ಸಭೆ ನಡೆಯಿತು.