ಬ್ಯಾಡಗಿ: ಬಿಸಿಯೂಟ ತಯಾರಕರಿಗೆ ಸೇವಾ ಭದ್ರತೆ ಹಾಗೂ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸುವಂತೆ ಆಗ್ರಹಿಸಿ ತಾಲೂಕು ಬಿಸಿಯೂಟ ತಯಾರಕರು ಮತ್ತು ಸಹಾಯಕಿಯರ ಸಂಘದ ಕಾರ್ಯಕರ್ತರು ತಹಸೀಲ್ದಾರ್ ಕಾರ್ಯಾಲಯ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ದಿನಗೂಲಿ ಕೂಡ ಸಿಗುತ್ತಿಲ್ಲ: ಈ ವೇಳೆ ಮಾತನಾಡಿದ ಅಧ್ಯಕ್ಷೆ ಸರೋಜ ಹಿರೇಮಠ, ತಾಲೂಕು ಬಿಸಿಯೂಟ ತಯಾರಕರು ಹಾಗೂ ಸಹಾಯಕಿಯರ ಸಂಘದ 2 ದಶಕಗಳ ಕಾಲ ನಾವು ಶಿಕ್ಷಣ ಇಲಾಖೆ ಮೂಲಕ ಸರ್ಕಾರ ಅನುಷ್ಠಾನಗೊಳಿಸಿದ ಅಕ್ಷರ ದಾಸೋಹ ಯೋಜನೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದು, ದಿನಗೂಲಿ ಕೂಡ ನಮಗೆ ಸಿಗದಷ್ಟು ವೇತನ ನಮಗೆ ನೀಡಲಾಗುತ್ತಿದೆ, ದಿನಸಿ ವಸ್ತುಗಳ ಏರಿಕೆಯಿಂದ ಜೀವನ ನಿರ್ವಹಣೆ ಅಸಾಧ್ಯವಾಗಿದೆ ಎಂದರು.
ಕನಿಷ್ಠ ವೇತನ ಹೆಚ್ಚಿಸಿ: ಕಳೆದ 2024 ಸಾಲಿನಲ್ಲಿ ಏಪ್ರಿಲ್ ಮತ್ತು ಮೇ ತಿಂಗಳ ರಜೆಯಲ್ಲಿ ಕಾರ್ಯಕರ್ತರು ಕೆಲಸ ನಿರ್ವ ಹಿಸಿದ್ದು, 2 ತಿಂಗಳ ವೇತನ ನೀಡಬೇಕು 2025-26ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಪರಿಶೀಲಿಸಿ ಕನಿಷ್ಠ ವೇತನ ಹೆಚ್ಚಿಸಲು ಆದೇಶ ಹೊರಡಿಸುವಂತೆ ಆಗ್ರಹಿಸಿದರು.ಸಿಬ್ಬಂದಿಗಳೆಂದು ಪರಿಗಣಿಸಿ:ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಡಿ.ದರ್ಜೆ ನೌಕರರಿಲ್ಲದ ಕಾರಣ ಬಿಸಿಯೂಟ ತಯಾರಕರು ಹಾಗೂ ಸಹಾಯಕಿಯರನ್ನು ಕೈತೋಟ ಸೇರಿದಂತೆ ಇತರೆ ಶಾಲಾ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದು, ಶಿಕ್ಷಣ ಇಲಾಖೆ ಸದರಿ ಕಾರ್ಯಕರ್ತೆಯರನ್ನು ಸಿಬ್ಬಂದಿಗಳೆಂದು ನೇಮಿಸಿಕೊಳ್ಳುವ ಮೂಲಕ ಸರ್ಕಾರ ನ್ಯಾಯ ಒದಗಿಸಲು ಮುಂದಾಗಲಿ.
ಬಳಿಕ ಶಿರಸ್ತೇದಾರ ಮಂಜುಳಾ ನಾಯಕ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಎಐಟಿಯುಸಿ ಸಂಘಟನೆ ರಾಜ್ಯಾಧ್ಯಕ್ಷ ಹೊನ್ನಪ್ಪ ಮರಿಯಮ್ಮನವರ, ಪದಾಧಿಕಾರಿಗಳಾದ ವಿನಾಯಕ ಕುರುಬರ, ಜಿ.ಡಿ.ಪೂಜಾರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹುಲ್ಲಾಳ, ಎಂ.ಶಾಂತಮ್ಮ ಬಿ.ಎಸ್.ಶೋಭಾ ಇತರರಿದ್ದರು.