ನಿರ್ಬಂಧ ಹಿಂಪಡೆಯದಿದ್ದರೆ ಬಬಲೇಶ್ವರದಿಂದ ಹೋರಾಟ

KannadaprabhaNewsNetwork |  
Published : Oct 19, 2025, 01:03 AM IST
ಕನ್ಹೇರಿ ಶ್ರೀ ನಿರ್ಬಂಧಕ್ಕೆ ಹಿಂದೂ ಜಾಗೃತ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳ ಜಿಲ್ಲಾ ಪ್ರವೇಶ ನಿರ್ಬಂಧ ಮಾಡಿರುವುದು ಖಂಡನೀಯ. ನಾಲ್ಕು ದಿನಗಳಲ್ಲಿ ಶ್ರೀಗಳ ನಿಷೇಧ ಆದೇಶ ವಾಪಸ್‌ ಪಡೆಯದಿದ್ದರೆ ಬಬಲೇಶ್ವರ ಮತ ಕ್ಷೇತ್ರದಿಂದಲೇ ಹೋರಾಟ ಆರಂಭಿಸುವುದಾಗಿ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳ ಜಿಲ್ಲಾ ಪ್ರವೇಶ ನಿರ್ಬಂಧ ಮಾಡಿರುವುದು ಖಂಡನೀಯ. ನಾಲ್ಕು ದಿನಗಳಲ್ಲಿ ಶ್ರೀಗಳ ನಿಷೇಧ ಆದೇಶ ವಾಪಸ್‌ ಪಡೆಯದಿದ್ದರೆ ಬಬಲೇಶ್ವರ ಮತ ಕ್ಷೇತ್ರದಿಂದಲೇ ಹೋರಾಟ ಆರಂಭಿಸುವುದಾಗಿ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ನಗರದಲ್ಲಿ ಕನ್ಹೇರಿ ಸ್ವಾಮೀಜಿಗಳ ಪ್ರವೇಶ ನಿರ್ಬಂಧವನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಹಿಂದೂ ಜಾಗೃತ ವೇದಿಕೆ ನೇತೃತ್ವದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ ವೃತ್ತದಲ್ಲಿ ನಡೆದ ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಹಿಂದೆ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ವೇಳೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲರು ರಂಭಾಪುರಿ, ಶ್ರೀಶೈಲ ಜಗದ್ಗುರುಗಳ ಬಗ್ಗೆ ನಡೆದುಕೊಂಡ ರೀತಿ ಇಡೀ ಸಮಾಜಕ್ಕೆ ಗೊತ್ತಿದೆ. ಈಗಲೂ ಅವರೇ ಕನ್ಹೇರಿ ಶ್ರೀಗಳ ಪ್ರವೇಶ ನಿರ್ಬಂಧದ ಹಿಂದೆ ಇದ್ದಾರೆ ಎಂದರು.

ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ನಡೆಸಿದ ನೀವು ಹಿಂದೂ ಅಲ್ಲ ಎನ್ನುತ್ತೀರಿ. ಆದರೆ ಮನೆಯಲ್ಲಿ ಶ್ರೀ ಕೃಷ್ಣನ ಪೂಜೆ ಮಾಡುತ್ತೀರಿ. ಹಾಗಾದರೆ ನೀವು ಹಿಂದೂ ಎಂಬುದನ್ನು ಒಪ್ಪಿಕೊಳ್ಳಿ, ಆಡುವ ಮಾತು ಒಂದು, ನಡೆದುಕೊಳ್ಳುವ ರೀತಿ ಮತ್ತೊಂದು. ಈ ರೀತಿ ಒಡೆದಾಳುವ ನೀತಿಯ ಬಗ್ಗೆ ಲಿಂಗಾಯತ ಮಠಾಧೀಶರು ಎಚ್ಚೆತ್ತುಕೊಳ್ಳಬೇಕು. ಧರ್ಮ ಕಾಲಂನಲ್ಲಿ ಹಿಂದೂ ಎಂದೇ ಬರೆಸಿ. ಲಿಂಗಾಯತ ಎಂದು ಬರೆಯಿಸಿ ಎಂದು ಹೇಳುವುದು ಒಡೆದಾಳುವ ಪ್ರಯತ್ನ, ಈ ಪ್ರಯತ್ನಕ್ಕೆ ಯಾರು ಬಲಿಯಾಗಬೇಡಿ ಎಂದು ಎಚ್ಚರಿಸಿದರು.

ಹಿಂದು ಸಂಘಟನೆ ಮುಖಂಡ ರಾಘವ ಅಣ್ಣಿಗೇರಿ ಮಾತನಾಡಿ, ಕನ್ಹೇರಿ ಶ್ರೀಗಳು ಹಿಂದುತ್ವಕ್ಕಾಗಿ, ಸಮಾಜಕ್ಕಾಗಿ, ರೈತರಿಗಾಗಿ, ರೋಗಿಗಳಿಗಾಗಿ ಸಾಕಷ್ಟು ಸೇವೆ ಮಾಡಿದ್ದಾರೆ. ಇಂತಹವರ ವಿರುದ್ಧ ನಿರ್ಬಂಧ ಹೇರಿರುವುದು ಅಕ್ಷಮ್ಯ ಅಪರಾಧವಾಗಿದೆ. ತಕ್ಷಣವೇ ನಿರ್ಬಂಧ ತೆರವುಗೊಳಿಸಬೇಕು, ಇಲ್ಲವಾದಲ್ಲಿ ಇದು ಇನ್ನಷ್ಟು ಉಗ್ರ ಹೋರಾಟದ ಸ್ವರೂಪ ಪಡೆದುಕೊಳ್ಳಲಿದೆ ಎಂದರು.

ಉಮೇಶ ಕಾರಜೋಳ ಮಾತನಾಡಿ, ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಅಪ್ಪಟ ಶಿಷ್ಯರು. ಅವರಿಗೆ ಮಾಡಿರುವ ಅಪಮಾನ. ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳಿಗೆ ಮಾಡಿದ ಅಪಮಾನವಾಗಿದೆ, ಇದನ್ನು ನಾವು ಸಹಿಸುವುದಿಲ್ಲ. ಜಿಲ್ಲೆಗೆ ಆಗಮಿಸದಂತೆ ನಿರ್ಬಂಧ ಆದೇಶ ಹಿಂಪಡೆಯದಿದ್ದರೆ ಮುಂದೆ ದೊಡ್ಡ ಹೋರಾಟಕ್ಕೆ ಅಣಿಯಾಗಲಾಗುವುದು ಎಂದು ತಿಳಿಸಿದರು.

ಸಹಕಾರಿ ಧುರೀಣ ರಮೇಶ ಬಿದನೂರ ಮಾತನಾಡಿ, ಕನ್ಹೇರಿ ಶ್ರೀಗಳ ಪೂರ್ವಾಶ್ರಮ ವಿಜಯಪುರ. ಇಲ್ಲಿಯೇ ಅವರಿಗೆ ಪ್ರವೇಶ ನಿರ್ಬಂಧಿಸಿರುವುದು ಅತ್ಯಂತ ನೋವಿನ ಸಂಗತಿ. ಇಡೀ ವಿಜಯಪುರ ಅಷ್ಟೇ ಅಲ್ಲ ಇಡೀ ಕರ್ನಾಟಕ ಅವರ ನಿಷೇಧ ವಾಪಾಸ್‌ ಪಡೆಯುವಂತೆ ಒತ್ತಾಯಿಸುತ್ತಿದೆ, ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಜನರ ಭಾವನೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಕನ್ಹೇರಿ ಶ್ರೀಗಳ ವಿಜಯಪುರ ಜಿಲ್ಲೆಗೆ ಪ್ರವೇಶ ನಿರ್ಬಂಧದಿಂದ ಮನಸ್ಸಿಗೆ ನೋವಾಗಿದೆ ಎಂದು ಪ್ರತಿಭಟನೆಯಲ್ಲಿ ಮಹಿಳೆಯರು ಕಣ್ಣೀರಿಟ್ಟರು. ಕನ್ಹೇರಿ ಶ್ರೀಗಳ ಭಾವಚಿತ್ರಕ್ಕೆ ಅವಮಾನಿಸಿದ ಪ್ರಸ್ತಾಪವಾಗುತ್ತಿದ್ದಂತೆ ಮಹಿಳೆಯರು ಭಾವೋದ್ವೇಗಕ್ಕೊಳಗಾಗಿ ಕಣ್ಣೀರು ಹಾಕಿದ ಘಟನೆ ಜರುಗಿತು. ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್.ಕೆ.ಬೆಳ್ಳುಬ್ಬಿ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ವಿಜುಗೌಡ ಪಾಟೀಲ, ಉಮೇಶ ವಂದಾಲ, ಶಿವರುದ್ರ ಬಾಗಲಕೋಟ, ರಾಹುಲ ಜಾಧವ, ವಿಜಯಕುಮಾರ ಕುಡಿಗನೂರ, ಈರಣ್ಣ ಪಟ್ಟಣಶೆಟ್ಟಿ, ಶಿವಾನಂದ ಮಖಣಾಪೂರ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ