ಉಡಾಫೆ ಉತ್ತರ ನೀಡುವ ಪಿಡಿಒಗೆ ಪ್ರತಿಭಟನೆ ಬಿಸಿ

KannadaprabhaNewsNetwork |  
Published : Jun 02, 2025, 12:42 AM IST
1 ಟಿವಿಕೆ 1 – ತುರುವೇಕೆರೆ ತಾಲೂಕು ಸೊರವನಹಳ್ಳಿ ಗ್ರಾಮ ಪಂಚಾಯಿತಿ ಮುಂಭಾಗ ಕೊಮರದೇವರಹಳ್ಳಿ, ಗೊಲ್ಲರಹಟ್ಟಿ, ದಾಸಿಹಳ್ಳಿಯ ಗ್ರಾಮಸ್ಥರು ಪಿಡಿಓ ಕಾರ್ಯವೈಖರಿ ವಿರುದ್ಧ ವಕೀಲ ನಾಗರಾಜು ನೇತೃತ್ವದಲ್ಲಿ ಕಿಡಿಕಾರಿದರು. | Kannada Prabha

ಸಾರಾಂಶ

ತಾಲೂಕಿನ ಸೊರವನಹಳ್ಳಿ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಅಲ್ಲಿನ ಕೆಲವು ಸದಸ್ಯರು ಮತ್ತು ಕೆಲವು ಗ್ರಾಮದ ಗ್ರಾಮಸ್ಥರು ಗರಂ ಆಗಿರುವ ಘಟನೆ ವರದಿಯಾಗಿದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಸೊರವನಹಳ್ಳಿ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಅಲ್ಲಿನ ಕೆಲವು ಸದಸ್ಯರು ಮತ್ತು ಕೆಲವು ಗ್ರಾಮದ ಗ್ರಾಮಸ್ಥರು ಗರಂ ಆಗಿರುವ ಘಟನೆ ವರದಿಯಾಗಿದೆ.

ತಾಲೂಕಿನ ಸೊರವನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಬರುವ ಕೊಮ್ಮರದೇವರಹಳ್ಳಿ, ಗೊಲ್ಲರಹಟ್ಟಿ, ದಾಸಿಹಳ್ಳಿಯ ಸುಮಾರು ಐವತ್ತಕ್ಕೂ ಹೆಚ್ಚು ಮಂದಿ ಭಾನುವಾರ ತಮ್ಮ ಗ್ರಾಮಗಳಲ್ಲಿ ಕಳೆದ ಏಳೆಂಟು ದಿನಗಳಿಂದ ಕುಡಿಯುವ ನೀರಿಗೆ ಸಮಸ್ಯೆ ಆಗಿದೆ. ಬೋರ್ ವೆಲ್ ಕೆಟ್ಟು ಹೋಗಿದೆ. ಅದನ್ನು ಕೂಡಲೇ ಸರಿಪಡಿಸಿ ನೀರಿನ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನವನ್ನು ಇಲ್ಲಿಯ ಪಿಡಿo ಹನುಮಂತರಾಜು ಮಾಡುತ್ತಿಲ್ಲ. ಗ್ರಾಮದಲ್ಲಿ ಉದ್ಭವಿಸಿರುವ ಸಮಸ್ಯೆಯ ಕುರಿತು ದೂರವಾಣಿ ಕರೆ ಮಾಡಿದರೆ ಉಡಾಪೆಯ ಉತ್ತರ ನೀಡುತ್ತಾರೆ. ಕೇಂದ್ರ ಸ್ಥಾನದಲ್ಲಿ ಎಲ್ಲಾ ಅಧಿಕಾರಿಗಳು ವಾಸವಿರಬೇಕೆಂದು ಮುಖ್ಯಮಂತ್ರಿಗಳೇ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಸಹ, ಈ ಅಧಿಕಾರಿ ಮುಖ್ಯಮಂತ್ರಿಗಳ ಸೂಚನೆಗೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡುತ್ತಿಲ್ಲ. ಇವರು ಪ್ರತಿದಿನಾ ನೆಲಮಂಗಲದಿಂದ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಮಧ್ಯಾಹ್ನ 12 ಗಂಟೆ ವೇಳೆಗೆ ಬರುವ ಅವರು ಸಂಜೆ 4 ಗಂಟೆಗೆ ಹಿಂತಿರುಗುವರು. ಕೇಳಿದರೆ ನೂರೆಂಟು ನೆಪ ಹೇಳುತ್ತಾರೆಂದು ವಕೀಲ ನಾಗರಾಜ್ ಆರೋಪಿಸಿದರು.

ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಶುಚಿತ್ವ ಎಂಬುದು ಮರೀಚಿಕೆಯಾಗಿದೆ. ಬೀದಿ ದೀಪಗಳ ಸೌಲಭ್ಯ ಇಲ್ಲದಾಗಿದೆ. ದೀಪ ಹಾಕಿಸಿ ಎಂದರೆ ಹಣ ಕೊಡಿ ಹಾಕಿಸುತ್ತೇನೆ ಎಂದು ಉಡಾಫೆಯ ಉತ್ತರ ನೀಡುತ್ತಾರೆ. ಇಲ್ಲಿಯ ಹಲವಾರು ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಸಾರ್ವಜನಿಕರನ್ನು ಏಕವಚನದಲ್ಲಿ ಮಾತನಾಡಿಸುವುದು ಅವರಿಗೆ ಅಭ್ಯಾಸವಾಗಿದೆ. ಪಂಚಾಯಿತಿಯ ಸೌಲಭ್ಯವನ್ನು ಜನರಿಗೆ ಮಾಡುತ್ತಿಲ್ಲ. ಬದಲಾಗಿ ಜನರಿಂದ ಹಣ ಸುಲಿಗೆ ಮಾಡಿಯೇ ಅವರ ಕೆಲಸ ಮಾಡುವುದು ಅವರ ವೃತ್ತಿಯಾಗಿದೆ ಎಂದು ನಾಗರಾಜು ಆರೋಪಿಸಿದರು.

ನಮ್ಮ ಗ್ರಾಮದಲ್ಲಿ ಜಾರಿಗೆ ತಂದಿರುವ ಜಲಜೀವನ್ ಯೋಜನೆಯೂ ಸಹ ಪಿಡಿಒ ಬೇಜವಾಬ್ದಾರಿತನದಿಂದ ವಿಫಲವಾಗಿದೆ. ಮನೆಗಳಿಗೆ ನೀರು ಸರಬರಾಜು ಆಗದಂತಾಗಿದೆ. ಇಲ್ಲಿಯ ಪಿಡಿಒ ನರಸಿಂಹರಾಜು ರವರ ದುರಾಡಳಿತದ ವಿರುದ್ಧ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿಯ ಸಿಇಓ ರವರಿಗೂ ಈ ಮೇಲ್ ಮೂಲಕ ದೂರು ದಾಖಲಿಸಲಾಗಿದೆ. ಕೂಡಲೇ ಈ ಅಧಿಕಾರಿಯನ್ನು ಅಮಾನತು ಮಾಡಬೇಕೆಂದು ನಾಗರಾಜ್ ಆಗ್ರಹಿಸಿದರು.

ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಶ್, ಬಾಲಾಜಿ, ಗೋವಿಂದಯ್ಯ, ಖಾಲಿದ್, ಮುಖಂಡರಾದ ಅರುಣ್ ಕುಮಾರ್, ಕೆ.ರೇವಣ್ಣ, ಕಣಕೂರು ಪಿಎಸಿಎಸ್ ನ ನಿರ್ದೇಶಕ ಕೆಂಚಯ್ಯ, ಸೇರಿದಂತೆ ಹಲವಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ