ಶ್ರೀರಂಗಪಟ್ಟಣ: ಸರ್ಕಾರ ಕಬ್ಬು ಬೆಳೆಗಾರರ ಹೋರಾಟವನ್ನು ಹತ್ತಿಕ್ಕಲು ಬೆಳಗಾವಿಯಲ್ಲಿ ರೈತರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ರೈತ ಸಂಘಟನೆಗಳ ಕಾರ್ಯಕರ್ತರು ರಸ್ತೆ ತಡೆ ಮಾಡಿ ಪ್ರತಿಭಟಿಸಿದರು.
ಮೈಸೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಕಬ್ಬು ಬೆಳೆಗಾರರು, ಈಗಾಗಲೇ ಕಬ್ಬಿಗೆ ₹5500 ನಿಗದಿ ಮಾಡಬೇಕು ಎಂದು ರಾಜ್ಯದ ಕಬ್ಬು ಬೆಳೆಗಾರ ರೈತರು ಕಳೆದೊಂದು ವಾರದಿಂದಲೂ ಹೋರಾಟ ಮಾಡುತ್ತಿದ್ದಾರೆ. ಸರ್ಕಾರಗಳ ಗಮನಕ್ಕೆ ತಂದರೂ ಯಾವುದೇ ಸರ್ಕಾರಗಳು ಗಮನವಿಲ್ಲದಂತೆ ಮೌನಿಯಾಗಿದ್ದಾರೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿಗಳು ಸಹ ರೈತರ ಬಗ್ಗೆ ಇಲ್ಲ ಸಲ್ಲದ ಉಡಾಫೆ ಮಾತುಗಳಾಡಿ ರೈತರನ್ನು ಕೆರಳುವಂತೆ ಮಾಡಿದ್ದಾರೆ. ನಾವು ಬೆಳೆದ ಕಬ್ಬಿಗೆ ವೈಜ್ಞಾನಿಕ ಬೆಳೆ ನಿಗದಿಗೆ ಆಗ್ರಹಿಸಿ ಹೋರಾಟ ಮಾಡುತ್ತಿರುವ ಬೆಳಗಾವಿಯ ರೈತರನ್ನು ಸರ್ಕಾರ ಬಂಧಿಸಿ ಪ್ರಕರಣ ದಾಖಲಿಸಿದ್ದು, ಕೂಡಲೇ ರೈತರ ಮೇಲಿನ ಪ್ರಕರಣ ಹಿಂಪಡೆಯಬೇಕು. ಬಂಧಿಸಿರುವ ಕಬ್ಬು ಬೆಳೆಗಾರರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ಮಾಡಿದ್ದರಿಂದ ಹೆದ್ದಾರಿಯಲ್ಲಿ ವಾಹನಗಳು ಸಾಲು ಸಾಲು ಜಮಾಗೊಂಡವು. ನಂತರ ಪೊಲೀಸರು ಮಧ್ಯ ಪ್ರವೇಶಿಸಿ ರೈತರನ್ನು ಸಮಾಧಾನ ಪಡಿಸಿ ಪ್ರತಿಭಟನೆ ಕೈ ಬಿಡಿಸಿದರು.
---------