ಅಧಿಕಾರಿಗಳ ಅಣಕು ಪಿಂಡ ಪ್ರದಾನ ಮಾಡಿ ಪ್ರತಿಭಟನೆ

KannadaprabhaNewsNetwork |  
Published : Oct 26, 2026, 03:30 AM IST
ಹದಗೆಟ್ಟ ರಾಷ್ಟಿçÃಯ ಹೆದ್ದಾರಿಯ ದುರಸ್ತಿಗೆ ಅಸಡ್ಡೆ ತೋರಿದ ಅಧಿಕಾರಿಗಳಿಗೆ ಅಣಕು ಪಿಂಡ ಪ್ರದಾನ ಮಾಡಿ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಮಾತನಾಡಿ, ಇಂತಹ ದುರ್ಗಮ ರಸ್ತೆಯಿಂದಾಗಿ ಅನೇಕ ಕುಟುಂಬಗಳ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದರು.

ಅಂಕೋಲಾ: ಯಲ್ಲಾಪುರ- ಅಂಕೋಲಾ ರಾಷ್ಟ್ರೀಯ ಹೆದ್ದಾರಿ 52 ಸಂಪೂರ್ಣ ಹದಗೆಟ್ಟಿದ್ದರೂ ಅದರ ದುರಸ್ತಿಗೆ ಲಕ್ಷ್ಯ ನೀಡದೇ, ಬೇಜಾವಾಬ್ದಾರಿ ಪ್ರದರ್ಶಿಸಿದ ಅಧಿಕಾರಿಗಳ ಪಿಂಡ ಪ್ರದಾನ ಮಾಡಿ 2 ಗಂಟೆ ಹೆದ್ದಾರಿ ತಡೆದು ವಿನೂತನವಾಗಿ ಪ್ರತಿಭಟಿಸಿದ ಘಟನೆ ಭಾನುವಾರ ನಡೆದಿದೆ.

ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯ್ಕ ಮಾತನಾಡಿ, ಹೆದ್ದಾರಿಯ ದುಸ್ಥಿತಿಯಿಂದ ವಾಹನ ಸವಾರರು ಪ್ರತಿದಿನ ಸಂಕಷ್ಟ ಅನುಭವಿಸುತ್ತಿದ್ದಾರೆ. ಜನರ ಈ ನೋವು ಅಧಿಕಾರಿಗಳ ಗಮನಕ್ಕೆ ಬರುತ್ತಿಲ್ಲವೇ? ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದಾಗ ಮಾತ್ರ ಅಧಿಕಾರಿಗಳಿಗೆ ಎಚ್ಚರವಾಗುತ್ತದೆಯೇ ಹೊರತು, ಉಳಿದ ಸಮಯದಲ್ಲಿ ಕಚೇರಿಗಳಲ್ಲಿ ಕುಳಿತು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಮಾತನಾಡಿ, ಇಂತಹ ದುರ್ಗಮ ರಸ್ತೆಯಿಂದಾಗಿ ಅನೇಕ ಕುಟುಂಬಗಳ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಬೈಕ್, ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಸಂಚರಿಸುವವರು ರಸ್ತೆ ಹೊಂಡಗಳಿಂದಾಗಿ ವಾಹನಗಳ ದುರಸ್ತಿ ವೆಚ್ಚವನ್ನು ಭರಿಸಬೇಕಾಗಿದೆ. ಇದರಿಂದ ನಿತ್ಯ ದುಡಿದು ಜೀವನ ಸಾಗಿಸುವ ಚಾಲಕರ ಆದಾಯಕ್ಕೂ ಹೊಡೆತ ಬೀಳುತ್ತಿದೆ. ಮನೆಯಿಂದ ಹೊರಟವರು ಸುರಕ್ಷಿತವಾಗಿ ಮರಳಿ ಬರುತ್ತಾರೆಯೇ ಎಂಬ ಆತಂಕ ಅವರ ಕುಟುಂಬದವರನ್ನು ಕಾಡುತ್ತಿದೆ. ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತು ಹೆದ್ದಾರಿಯನ್ನು ದುರಸ್ತಿಪಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಸಂಬಂಧಪಟ್ಟ ಅಧಿಕಾರಿಯನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡು, ಹೆದ್ದಾರಿಯ ದುಸ್ಥಿತಿಯನ್ನು ವಿವರಿಸಿ ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಒತ್ತಾಯಿಸಿದರು. ಪ್ರತಿಭಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ತಾಸಿಗೂ ಅಧಿಕ ಕಾಲ ಸಂಚಾರ ವ್ಯತ್ಯಯ ಉಂಟಾಯಿತು. ಸ್ಥಳದಲ್ಲಿ ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ವಿಧ ಇಲಾಖೆ ಅಧಿಕಾರಿಗಳಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಜಿಪಂ ಮಾಜಿ ಸದಸ್ಯ ಜಿ.ಎಂ. ಶೆಟ್ಟಿ, ಪುರಸಭೆ ಮಾಜಿ ಅಧ್ಯಕ್ಷ ಭಾಸ್ಕರ ನಾರ್ವೇಕರ, ತುಳಸಿದಾಸ ಕಾಮತ, ಗಣಪತಿ ಮೂಲೆಮನೆ, ನ್ಯಾಯವಾದಿಗಳಾದ ನಾಗಾನಂದ ಬಂಟ, ಉಮೇಶ ನಾಯ್ಕ, ಸಂದೇಶ ಎಂ. ನಾಯ್ಕ, ಭಾವಿಕೇರಿ ಗ್ರಾಪಂ ಮಾಜಿ ಅಧ್ಯಕ್ಷ ರವಿ ಟಿ. ನಾಯ್ಕ, ರಾಘು ನಾಯ್ಕ ಕೇಣಿ ಸೇರಿದಂತೆ ಹಲವು ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.ಸಂಘಟನೆಗಳ ಸಾಥ್

ಶಿವಾನಂದ ನಾಯ್ಕ, ಸುರೇಶ ವೆರ್ಣೇಕರ, ವಿಜಯಕುಮಾರ ನಾಯ್ಕ ಹಾಗೂ ತಂಡದವರು ಹದಗೆಟ್ಟ ಹೆದ್ದಾರಿಯ ಮೇಲೆಯೇ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳ ಪಿಂಡ ಪ್ರದಾನ ಅಣಕು ಕಾರ್ಯಕ್ರಮ ನಡೆಸಿ, ತಮ್ಮದೆ ಶೈಲಿಯಲ್ಲಿ ಹಾಡನ್ನು ಹಾಡುವ ಮೂಲಕ ಇಲಾಖೆಯ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜನಶಕ್ತಿ ವೇದಿಕೆಯೊಂದಿಗೆ ಲಾರಿ, ಟ್ಯಾಕ್ಸಿ, ಆಟೋ ಚಾಲಕ-ಮಾಲೀಕರ ಸಂಘಟನೆಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಪ್ರತಿಭಟನೆಗೆ ಕೈಜೋಡಿಸಿದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶತ ಶತಮಾನದಿಂದಲೂ ಅಭಿವೃದ್ಧಿ ಕಾಣದ ಸ್ಮಾರಕ
ಅಯೋಡಿನ್ ಯುಕ್ತ ಉಪ್ಪು ಕುಟುಂಬದ ಆರೋಗ್ಯ ಸಂರಕ್ಷಕ: ಡಾ. ಪ್ರೀತ್