ಮುಂಗಾರಿಲ್ಲ, ಹಿಂಗಾರಿಲ್ಲ ಪರಿಹಾರವಂತೂ ಇಲ್ಲವೇ ಇಲ್ಲ!

KannadaprabhaNewsNetwork |  
Published : Oct 26, 2026, 03:30 AM IST
ಗದಗ ಗ್ರಾಮೀಣ ಭಾಗದ ಹೊಲವೊಂದರಲ್ಲಿ ಬಿತ್ತನೆ ಮಾಡಿದ ಕಡಲೆ ಬೀಜ, ಕೆಲ ಕಡೆ ಹುಟ್ಟಿದರೇ, ಇನ್ನ ಕೆಲ ಕಡೆ ಹುಟ್ಟದೇ ಇರುವುದು. | Kannada Prabha

ಸಾರಾಂಶ

ಮುಂಗಾರಿನು ಹೋತ್ರೀ... ಹಿಂಗಾರುನು ಇಲ್ಲರ್ರೀ ಎಲ್ಲಿ ನೋಡಿದರೂ ಖಾಲಿ ಹೊಲ, ಒಣಗಿದ ಬೆಳೆಗಳು ಕಾಣ್ತಾವರ್ರೀ ಎಲ್ಲೋ ಅಲ್ಲೊಂದು, ಇಲ್ಲೊಂದ ಹೊಲದಾಗ ಕಡ್ಲಿ ಬಿತ್ಯಾರ ಮಳಿನಾ ಇಲ್ಲ, ಅದು ಬರೋಲ್ಲ ರ್ರೀ...ಬರಗಾಲ ಬಿದ್ದಿದೆ..

ಬರಗಾಲ ಘೋಷಣೆಯಾಗಿ ತಿಂಗಳು ಕಳೆದರೂ ನಯಾಪೈಸೆ ಪರಿಹಾರ ಇಲ್ಲಮಹೇಶ ಛಬ್ಬಿ

ಕನ್ನಡಪ್ರಭ ವಾರ್ತೆ ಗದಗ

ಮುಂಗಾರಿನು ಹೋತ್ರೀ... ಹಿಂಗಾರುನು ಇಲ್ಲರ್ರೀ ಎಲ್ಲಿ ನೋಡಿದರೂ ಖಾಲಿ ಹೊಲ, ಒಣಗಿದ ಬೆಳೆಗಳು ಕಾಣ್ತಾವರ್ರೀ ಎಲ್ಲೋ ಅಲ್ಲೊಂದು, ಇಲ್ಲೊಂದ ಹೊಲದಾಗ ಕಡ್ಲಿ ಬಿತ್ಯಾರ ಮಳಿನಾ ಇಲ್ಲ, ಅದು ಬರೋಲ್ಲ ರ್ರೀ...ಬರಗಾಲ ಬಿದ್ದಿದೆ.. ಯಾವ ಸರ್ಕಾರ, ರಾಜಕಾರಣಿಗಳು ರೈತನ ಕಣ್ಣಿರು ಒರಿಸೋಕೆ ಬರೋಲ್ಲರ್ರೀ.. ಕೊನೆಗೆ ನಮ್ಮಂತ ರೈತರು ಹೊಯ್ಯಿಕೊಂತ ಹೋಗದ ನೋಡರ್ರೀ.... ಹೀಗೆ ಮುಗಿಲು ನೋಡುತ್ತಾ ಜಿಲ್ಲೆಯ ಬಹುತೇಕ ರೈತರು ತಮ್ಮ ನೋವನ್ನು ವ್ಯಕ್ತಪಡಿಸುತ್ತಿದ್ದಾರೆ.

ಮುಂಗಾರಲ್ಲಿ ಬಿತ್ತನೆ ಮಾಡಿದ ಹೆಸರು, ಶೇಂಗಾ, ಗೋವಿನ ಜೋಳ, ಹತ್ತಿ, ಮೆಣಸಿನಕಾಯಿ ಬೆಳೆಗಳು ಮಳೆ ಇಲ್ಲದೇ ತೇವಾಂಶ ಕೊರತೆಯಿಂದ ಚಿಗುರೆಲೆಯಲ್ಲಿ ಬಾಡಿ ನಾಶವಾದವು. ಬಂದ ಅಲ್ಪ ಫಸಲು ಮಾಡಿದ ಖರ್ಚಿಗೆ ಸಾಲಲಿಲ್ಲ. ಮುಂಗಾರು ಹೋದರು, ಹಿಂಗಾರು ಕೈ ಹಿಡಿಯುತ್ತೆ ಎಂಬ ಆಶಾಭಾವನೆ ಹೊತ್ತಿದ್ದ ರೈತರಿಗೆ ಹಿಂಗಾರು ಮಳೆ ಬಾರದೇ ತಣ್ಣೀರು ಎರಚಿದೆ. ಕೆಲವು ಕಡೆ ಮಳೆಯಾದರೆ, ಇನ್ನ ಕೆಲವು ಕಡೆ ಮಳೆ ಇಲ್ಲ, ಅಲ್ಪ ಸುರಿದ ಮಳೆಗೆ ರೈತರು ಧೃತಿಗೆಡದೆ ಒಣ ಭೂಮಿಯಲ್ಲಿಯೇ ಮತ್ತೆ ಧೈರ್ಯ ಮಾಡಿ ಕಡಲೆ ಬೀಜ ಬಿತ್ತಿದ್ದಾರೆ, ಆದರೆ ಮತ್ತೆ ಮಳೆ ಇಲ್ಲದೇ ರೈತರು ಚಿಂತೆಗೀಡಾಗಿದ್ದಾರೆ.

ಬೋರ್‌ವೆಲ್‌ಗಳಲ್ಲಿಯೂ ನೀರಿಲ್ಲ:

ಮುಂಗಾರು ಕೊರತೆಯಿಂದ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಬಿತ್ತನೆ ಮಾಡಿದ ಬೆಳೆಗಳ ರಕ್ಷಣೆಗೆ ರೈತರು ಅಕ್ಕ-ಪಕ್ಕದ ಹೊಲದವರ ಹತ್ತಿರ ಕೇಳಿ ಬೋರ್‌ವೆಲ್ ಮೂಲಕ ಬೆಳೆಗಳಿಗೆ ನೀರು ಹಾಯಿಸುತ್ತಿದ್ದಾರೆ. ಆದರೆ ನೀರು ಸಾಲದೇ ಮಳೆಯಾಶ್ರಿತ, ಸೇರಿದಂತೆ ತೋಟಗಾರಿಕೆ ಬೆಳೆಗಳು ಬಾಡುತ್ತಿವೆ.

ಜಾನುವಾರಗಳದ್ದೇ ಚಿಂತೆ:

ರೈತನ ಒಡನಾಡಿ, ರೈತನ ಶಕ್ತಿಯಾಗಿರುವ ಜಾನುವಾರುಗಳ ರಕ್ಷಣೆಯೇ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಹೊಟ್ಟು, ಮೇವು ಕೊರತೆ, ಕುಡಿಯಲು ಬಾವಿ, ಕೆರೆಗಳಲ್ಲಿ ನೀರಿಲ್ಲದೇ ಲಕ್ಷ, ಲಕ್ಷ ಕೊಟ್ಟು ಖರೀದಿಸಿದ್ದ ಜಾನುವಾರಗಳನ್ನು ರೈತರು ಕಣ್ಣೀರಿಡುತ್ತ ಬಂದಷ್ಟು ಬೆಲೆಗೆ ಮಾರಾಟ ಮಾಡುವಂತಹ ಸ್ಥಿತಿ ರೈತನಿಗೆ ಬಂದಿದೆ.

ಗದಗ ಜಿಲ್ಲೆಯನ್ನು ಸಂಪೂರ್ಣ ಬರಗಾಲವೆಂದು ಘೋಷಣೆ ಮಾಡಿ ತಿಂಗಳು ಕಳೆದರು, ಒಂದು ನೈಯಾಪೈಸೆ ಪರಿಹಾರವನ್ನು ಸರ್ಕಾರ ಈ ವರೆಗೂ ನೀಡಿಲ್ಲ. ಸರ್ಕಾರಗಳು ರಾಜಕೀಯ ಮಾಡುತ್ತಿವೆಯೇ ಹೊರತು, ರೈತನ ಕಣ್ಣೀರು ಒರೆಸುವ ಕೆಲಸ ಮಾಡುತ್ತಿಲ್ಲ, ರೈತರು ತುಂಬಿದ ಬೆಳೆ ವಿಮೆ ಪರಿಹಾರ ನೀಡುತ್ತಿಲ್ಲ, ಸರ್ಕಾರ ಘೋಷಣೆ ಮಾಡಿರುವ ₹2500 ಒಂದು ಚೀಲ ಗೊಬ್ಬರಕ್ಕೂ ಸಾಲುವುದಿಲ್ಲ ಎಂದು ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವತಃ ಮುಖ್ಯಮಂತ್ರಿಗಳೇ ಬಂದು ಬರ ಪರಿಶೀಲನೆ ಮಾಡಿ, ಹೋದರೂ ತಕ್ಷಣ ಬರ ಘೋಷಣೆ ಮಾಡಲಿಲ್ಲ, ರೈತರು ಬಿದಿಗಿಳಿದು ಹೋರಾಟ ಮಾಡಿದ ನಂತರ ಬರಗಾಲ ಘೋಷಣೆ ಮಾಡಿದರು. ಹೀಗೇ ಪರಿಹಾರ ಪಡೆಯಬೇಕೆಂದರೂ ನಾವು ಮತ್ತೆ ಹೋರಾಟ ಮಾಡಬೇಕಾಗಿದೆ. ಮಾತು ಎತ್ತಿದರೆ ರೈತಪರ, ಜನಪರ ಎಂದು ಭಾಷಣ ಮಾಡಿ ಹೋಗುವ ಜನಪ್ರತಿನಿಧಿಗಳು ಇಂತಹ ದಯನೀಯ ಸ್ಥಿತಿಯಲ್ಲಿದ್ದರೂ ರೈತನ ಕಣ್ಣೀರು ಒರೆಸುವ ಪ್ರಯತ್ನವನ್ನು ಯಾವೊಬ್ಬ ರಾಜಕಾರಣಿಗಳು ಮಾಡುತ್ತಿಲ್ಲ ಎನ್ನುವುದು ರೈತ ಸಮುದಾಯದ ಆಕ್ರೋಶವಾಗಿದೆ.

ತಕ್ಷಣ ಪರಿಹಾರ ನೀಡಿ:

ಮಳೆ ಕೊರತೆಯಿಂದ ರೈತರು, ಜಾನುವಾರುಗಳು ಸಂಕಷ್ಟದಲ್ಲಿದ್ದಾರೆ. ದಿನನಿತ್ಯ ವಸ್ತುಗಳ ಬೆಲೆ ಏರಿಕೆ ಬರೆ ರೈತನನ್ನು ಮತ್ತಷ್ಟು ಕಂಗೆಡಿಸಿದೆ. ಸರ್ಕಾರ ತಕ್ಷಣವೇ ಎಕರೆಗೆ ₹20-25 ಸಾವಿರ ಪರಿಹಾರ ನೀಡಬೇಕು. ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಜತೆಗೆ ಮೇವಿನ ಬ್ಯಾಂಕ್‌ ತೆರೆಯಬೇಕು ಎಂದು ರೈತರ ಸಂಘದ ಸದಸ್ಯರು ಆಗ್ರಹಿಸಿದ್ದಾರೆ.ಬರಗಾಲ ಘೋಷಣೆ ಮಾಡಿ ತಿಂಗಳು ಗತಿಸಿದರೂ, ನಯಾ ಪೈಸೆ ಪರಿಹಾರ ನೀಡಿಲ್ಲ, ಕೇವಲ ಭರವಸೆ ನೀಡಿದರೆ ಸಾಲದು, ತಕ್ಷಣವೇ ರೈತನ ಸಂಕಷ್ಟಕ್ಕೆ ಸ್ಪಂದಿಸಬೇಕು. ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತಿದೆ.

ಮಹಾಂತೇಶ ಗುಂಜಳ, ರೈತ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶತ ಶತಮಾನದಿಂದಲೂ ಅಭಿವೃದ್ಧಿ ಕಾಣದ ಸ್ಮಾರಕ
ಅಯೋಡಿನ್ ಯುಕ್ತ ಉಪ್ಪು ಕುಟುಂಬದ ಆರೋಗ್ಯ ಸಂರಕ್ಷಕ: ಡಾ. ಪ್ರೀತ್