ಟಿ.ನರಸೀಪುರ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ಏಳೆಂಟು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ 2024-25 ರ ಶೈಕ್ಷಣಿಕ ಸಾಲಿನ 10 ತಿಂಗಳ ಸಂಬಳ ನೀಡದೆ ದುಡಿಸಿಕೊಂಡಿರುವ ಸರ್ಕಾರದ ನಡೆಯನ್ನು ದಸಂಸ ಖಂಡಿಸಿದೆ.
ವಿದ್ಯಾವಂತ ನಿರುದ್ಯೋಗಿಗಳಾಗಿರುವ ಇವರು ತಮ್ಮ ಜೀವನ ನಿರ್ವಹಣೆಗಾಗಿ ವಾರಕ್ಕೆ 20 ಗಂಟೆಯಂತೆ ತಿಂಗಳಿಗೆ 80 ಗಂಟೆಗಳ ಕಾಲ ಸರ್ಕಾರ ನೀಡುವ 12 ಸಾವಿರ ಗೌರವಧನ ನಂಬಿ ಕೆಲಸ ಮಾಡುತ್ತಿದ್ದರೂ ಕಳೆದ ಶೈಕ್ಷಣಿಕ ಸಾಲಿನ 10 ತಿಂಗಳು ಸಂಬಳ ನೀಡದೆ ಜೀತದಾಳುಗಳಂತೆ ದುಡಿಸಿಕೊಂಡಿರುವುದು ಅಮಾನವೀಯವಾಗಿರುತ್ತದೆ. ಕೂಡಲೆ ಸಂಕಷ್ಟದಲ್ಲಿರುವ ಇವರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಸರ್ಕಾರದ ವಿರುದ್ಧ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳ ಜೊತೆ ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದು ಅವರು ಎಚ್ಚರಿಸಿದರು.
ಅತಿಥಿ ಉಪನ್ಯಾಸಕ ಅಂಜನ್ ಕುಮಾರ್, ಮಾತನಾಡಿ ಕಳೆದ 6 ವರ್ಷಗಳಿಂದ ಉತ್ತಮ ಫಲಿತಾಂಶದಿಂದ ವಿವಿಧ ವಿಷಯಗಳ 6 ಜನ ಉಪನ್ಯಾಸಕರು ಕೆಲಸ ಮಾಡುತ್ತಿದ್ದು, ನಮಗೆ ಸರ್ಕಾರದಿಂದಲೇ ನೇರವಾಗಿ ಸಂಬಳ ಬಿಡುಗಡೆ ಆಗುತ್ತಿದ್ದು, ಕಳೆದ ಶೈಕ್ಷಣಿಕ ಸಾಲಿನಲ್ಲಿ ನಮಗೆ ಸಂಬಳ ನೀಡದೆ 10 ತಿಂಗಳುಗಳ ಕಾಲ ಜೀತದಾಳುಗಳಾಗಿ ದುಡಿಸಿಕೊಂಡು ಈಗ ಬೀದಿಗೆ ತಳ್ಳಿರುವುದರಿಂದ ನಮಗೆ ದಿಕ್ಕು ತೋಚದಂತಾಗಿದೆ. ದುಡಿಮೆಯ ಸಂಬಳ ಕೇಳಿ ಪ್ರಾಂಶುಪಾಲರು, ಉಪನಿರ್ದೇಶಕರ ನಿರ್ದೇಶಕರ ಕಚೇರಿ ಹಾಗೂ ಸಂಬಂಧಿಸಿದ ಸಚಿವರ ಮನೆ ಬಾಗಿಲಿಗೆ ಅಲೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.ಸುದ್ದಿಗೋಷ್ಠಿಯಲ್ಲಿ ಅತಿಥಿ ಉಪನ್ಯಾಸಕರಾದ ರಾಜಮ್ಮ, ಕವಿತಾ, ಪೋಷಕರಾದ ಮಹಾದೇವಯ್ಯ ಇದ್ದರು.