ಅದಿರು ಲಾರಿಗಳಿಗೆ ಪ್ರತ್ಯೇಕ ಕಾರಿಡಾರ್ ಬೇಡಿಕೆ ಸಾಕಾರಗೊಳ್ಳುವುದೇ?

KannadaprabhaNewsNetwork |  
Published : Jun 16, 2025, 02:13 AM ISTUpdated : Jun 16, 2025, 02:14 AM IST
ಚಿತ್ರ: ೧೫ಎಸ್.ಎನ್.ಡಿ.೦೧- ಸಂಡೂರು-ಶ್ರೀಕುಮಾರಸ್ವಾಮಿ ಮಾರ್ಗದಲ್ಲಿ ಸಂಚರಿಸುತ್ತಿರುವ ಅದಿರು ಸಾಗಣೆ ಲಾರಿಗಳು. ೧೫ಎಸ್.ಎನ್.ಡಿ.೦೨- ಸಂಡೂರು-ಶ್ರೀಕುಮಾರಸ್ವಾಮಿ ದೇವಸ್ಥಾನದ ಮಾರ್ಗದಲ್ಲಿ ರಸ್ತೆ ಅಗಲೀಕರಣಕ್ಕಾಗಿ ಸರ್ವೇ ಕಾರ್ಯ ನಡೆಸುತ್ತಿರುವುದು. | Kannada Prabha

ಸಾರಾಂಶ

ಸಂಡೂರು-ಹೊಸಪೇಟೆ ಮಾರ್ಗದಲ್ಲಿ ಅದಿರು ಲಾರಿಗಳ ಸಂಚಾರಕ್ಕೆ ಪ್ರತ್ಯೇಕ ಕಾರಿಡಾರ್ ರಸ್ತೆ ನಿರ್ಮಾಣ ಮಾಡಬೇಕೆಂಬ ಈ ಭಾಗದ ಹಲವು ವರ್ಷಗಳ ಬೇಡಿಕೆ ಹಾಗೂ ಒತ್ತಾಯ ಸಾಕಾರಗೊಳ್ಳುವ ಕಾಲ ಸನ್ನಿಹಿತವಾಗಿದೆ ಎಂಬ ಭಾವನೆ ಜನರಲ್ಲಿ ಮೂಡಿದೆ.

ಗಣಿಗೆ ಸಂಬಂಧಿಸಿದ ವಾಹನಗಳಿಂದಲೇ ಹೆಚ್ಚಿನ ಅಪಘಾತ

ಕೆಎಂಇಆರ್‌ಸಿ ವ್ಯವಸ್ಥಾಪಕ ನಿರ್ದೇಶಕರಿಂದ ಸ್ಥಳ ಪರಿಶೀಲನೆವಿ.ಎಂ. ನಾಗಭೂಷಣ

ಕನ್ನಡಪ್ರಭ ವಾರ್ತೆ ಸಂಡೂರುಕೆಎಂಇಆರ್‌ಸಿ (ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ)ದ ವ್ಯವಸ್ಥಾಪಕ ನಿರ್ದೇಶಕ ಡಾ. ಸಂಜಯ್ ಎಸ್. ಬಿಜ್ಜೂರು ಸಂಡೂರು ತಾಲೂಕಿಗೆ ಭೇಟಿ ನೀಡಿದ್ದ ಸಂದರ್ಭ ಸಂಡೂರು-ಹೊಸಪೇಟೆ ಮಾರ್ಗದಲ್ಲಿ ಪ್ರಸ್ತಾವಿತ ಕಾರಿಡಾರ್ ರಸ್ತೆ ನಿರ್ಮಾಣ ಕುರಿತು ಸ್ಥಳ ಪರಿಶೀಲನೆ ಮಾಡಿದ್ದಾರೆ. ಸಂಡೂರು-ಹೊಸಪೇಟೆ ಮಾರ್ಗದಲ್ಲಿ ಅದಿರು ಲಾರಿಗಳ ಸಂಚಾರಕ್ಕೆ ಪ್ರತ್ಯೇಕ ಕಾರಿಡಾರ್ ರಸ್ತೆ ನಿರ್ಮಾಣ ಮಾಡಬೇಕೆಂಬ ಈ ಭಾಗದ ಹಲವು ವರ್ಷಗಳ ಬೇಡಿಕೆ ಹಾಗೂ ಒತ್ತಾಯ ಸಾಕಾರಗೊಳ್ಳುವ ಕಾಲ ಸನ್ನಿಹಿತವಾಗಿದೆ ಎಂಬ ಭಾವನೆ ಜನರಲ್ಲಿ ಮೂಡಿದೆ. ತಾಲೂಕಿನ ವಿವಿಧೆಡೆ ನಡೆಯುತ್ತಿರುವ ವಾಹನ ಅಪಘಾತಗಳಲ್ಲಿ ಗಣಿಗೆ ಸಂಬಂಧಿಸಿದ ವಾಹನಗಳಿಂದಲೇ ಹೆಚ್ಚಿನ ಅಪಘಾತ ಸಂಭವಿಸುತ್ತಿವೆ. ಸಂಡೂರು-ಹೊಸಪೇಟೆ ಮಾರ್ಗದಲ್ಲಿ ಇತ್ತೀಚೆಗೆ ಕಾರಿಗೆ ಅದಿರು ಲಾರಿ ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ಲಕ್ಷ್ಮೀಪುರದ ಒಂದೇ ಕುಟುಂಬದ ಐವರು ಮೃತಪಟ್ಟ ನಂತರ ಅದಿರು ಲಾರಿಗಳ ಸಂಚಾರಕ್ಕೆ ಪ್ರತ್ಯೇಕ ಕಾರಿಡಾರ್ ನಿರ್ಮಿಸಬೇಕೆಂಬ ಒತ್ತಾಯ ಇನ್ನಷ್ಟು ಜೋರಾಗಿದೆ.

ಸಂಡೂರು-ಶ್ರೀಕುಮಾರಸ್ವಾಮಿ ರಸ್ತೆಯಲ್ಲಿಯೂ ಪ್ರತ್ಯೇಕ ಕಾರಿಡಾರ್ ನಿರ್ಮಾಣವಾಗಬೇಕಿದೆ. ಸಂಡೂರು-ಶ್ರೀಕುಮಾರಸ್ವಾಮಿ ದೇವಸ್ಥಾನ ಮಾರ್ಗದಲ್ಲಿಯೂ ಅದಿರು ಲಾರಿಗಳ ಸಂಚಾರ ಹೆಚ್ಚಿದ್ದು, ಇಲ್ಲಿಯೂ ಅದಿರು ಲಾರಿಗಳಿಗೆ ಪ್ರತ್ಯೇಕ ಕಾರಿಡಾರ್ ನಿರ್ಮಿಸಬೇಕೆಂಬ ಒತ್ತಾಯ ಹಿಂದಿನಿಂದಲೂ ಕೇಳಿ ಬರುತ್ತಿದೆ.

ಈ ದೇವಸ್ಥಾನದ ಮಾರ್ಗದಲ್ಲಿಯೇ ನಂದಿಹಳ್ಳಿ ಗ್ರಾಮ ಹಾಗೂ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರವಿದೆ. ಈ ಮಾರ್ಗದಲ್ಲಿ ಅದಿರು ಲಾರಿಗಳ ಸಂಚಾರ ಹೆಚ್ಚಿರುತ್ತದೆ. ಈ ಮಾರ್ಗದಲ್ಲಿ ಸಂಚರಿಸುವ ಪಾದಾಚಾರಿಗಳು, ಬೈಕ್ ಸವಾರರು ಹಲವು ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಧೂಳು ಬಾರದಂತೆ ತಡೆಯಲು ರಸ್ತೆಗೆ ನೀರು ಹಾಕಿದರೆ, ಬೈಕ್‌ಗಳು ಸ್ಕಿಡ್ ಆಗಿ ವಾಹನ ಸವಾರರು ಬೀಳುವ ಸಂಭವವಿದೆ. ನೀರು ಹಾಕಿದ ರಸ್ತೆಯಲ್ಲಿ ವಾಹನಗಳು ಸಂಚರಿಸಿದಾಗ, ಪಕ್ಕದಲ್ಲಿ ತೆರಳುವ ದ್ವಿಚಕ್ರ ವಾಹನ ಸವಾರರು, ಪಾದಾಚಾರಿಗಳ ಮೈ ಹಾಗೂ ಬಟ್ಟೆಗಳ ಮೇಲೆ ಕೆಂಪಾದ ನೀರು ಸಿಡಿದು, ಬಟ್ಟೆಗಳ ಬಣ್ಣವೇ ಬದಲಾಗುತ್ತದೆ. ನೀರು ಹಾಕಿಲ್ಲವೆಂದರೆ, ರಸ್ತೆಯಲ್ಲಿ ಕೆಂಧೂಳು ಜನರನ್ನು ಹಾಗೂ ಸುತ್ತಲಿನ ರೈತರ ಹೊಲಗಳಲ್ಲಿನ ಬೆಳೆಯನ್ನು ಆವರಿಸಿಕೊಳ್ಳುತ್ತದೆ.

ಸಂಡೂರು-ಶ್ರೀಕುಮಾರಸ್ವಾಮಿ ರಸ್ತೆಯನ್ನು ಅಗಲೀಕರಣಗೊಳಿಸುವ ಉದ್ದೇಶದಿಂದ ಈ ರಸ್ತೆಯ ಸರ್ವೇ ಕಾರ್ಯ ಆರಂಭಿಸಲಾಗಿದೆ.

ಪ್ರಸ್ತುತ ಸಂಡೂರು-ಹೊಸಪೇಟೆ ಮಾರ್ಗದಲ್ಲಿ ಕಾರಿಡಾರ್ ರಸ್ತೆ ನಿರ್ಮಾಣದ ಪ್ರಸ್ತಾವಕ್ಕೆ ಮೂರ್ತ ರೂಪ ನೀಡುವ ಪ್ರಕ್ರಿಯೆಗಳು ಆರಂಭವಾಗಿರುವುದು ಉತ್ತಮ ಬೆಳೆವಣಿಗೆಯಾಗಿದೆ. ಶ್ರೀಕುಮಾರಸ್ವಾಮಿ ರಸ್ತೆ ಕೇವಲ ಅಗಲೀಕರಣವಾಗದೆ, ಈ ಮಾರ್ಗದಲ್ಲಿಯೂ ಪ್ರತ್ಯೇಕ ಕಾರಿಡಾರ್ ರಸ್ತೆ ನಿರ್ಮಿಸಬೇಕೆಂಬುದು ಜನರ ಹಕ್ಕೊತ್ತಾಯವಾಗಿದೆ.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ