ಪಿಟಿಸಿಎಲ್ ಮಂಜೂರಾತಿ ಜಮೀನುಗಳಲ್ಲಿ ಕ್ಷೇತ್ರ ವ್ಯತ್ಯಾಸವಾದರೆ ಬಿಡದಿ ಮಾದರಿ ಹೋರಾಟ ಕೈಗೊಳ್ಳಲಾಗುವುದು ಎಂದು ತಾಲೂಕಿನ ಹುಲ್ಲತ್ತಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ರಾಣಿಬೆನ್ನೂರು: ಪಿಟಿಸಿಎಲ್ ಮಂಜೂರಾತಿ ಜಮೀನುಗಳಲ್ಲಿ ಕ್ಷೇತ್ರ ವ್ಯತ್ಯಾಸವಾದರೆ ಬಿಡದಿ ಮಾದರಿ ಹೋರಾಟ ಕೈಗೊಳ್ಳಲಾಗುವುದು ಎಂದು ತಾಲೂಕಿನ ಹುಲ್ಲತ್ತಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಬುಧವಾರ ತಹಸೀಲ್ದಾರ್ ಆರ್.ಎಚ್. ಭಾಗವಾನ ಮೂಲಕ ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಿದ್ದಾರೆ. ಗ್ರಾಮದ ವಂದೇ ಮಾತರಂ ಯುವಕ ಸ್ವಯಂ ಸೇವಾ ಸಮಿತಿಯ ಜಗದೀಶ ಕೆರೂಡಿ ಮಾತನಾಡಿ, 1978ರಲ್ಲಿ ಧಾರವಾಡ ಜಿಲ್ಲಾ ವ್ಯಾಪ್ತಿಗೆ ಒಳಪಟ್ಟಿದ್ದ ರಾಣಿಬೆನ್ನೂರು ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳ ಏಳಿಗೆಗಾಗಿ ಸಾವಿರಾರು ಎಕರೆ ಭೂಮಿ ನೀಡಲಾಗಿತ್ತು. ಭೂಪರಭಾರೆ ನಿಷೇಧ ಕಾಯ್ದೆಗೆ ಒಳಪಡಿಸಿ ಸರ್ಕಾರ ಹಕ್ಕುಪತ್ರ ಮಂಜೂರಾತಿ ನೀಡಿದೆ. ಸರ್ಕಾರ ನೀಡಿದ ಆದೇಶ ಪತ್ರದ ಅನುಗುಣವಾಗಿ ನಾವು ನಮ್ಮ ಜಮೀನುಗಳಲ್ಲಿ ವ್ಯವಸಾಯ ಮಾಡಿಕೊಂಡು ಉಪಜೀವನ ಕಟ್ಟಿಕೊಂಡಿದ್ದೇವೆ. ಅಂದು ಸರ್ಕಾರ ಮಂಜೂರಾತಿ ಜಮೀನುಗಳನ್ನು ಹಿಸ್ಸಾವಾರು ಪ್ರತ್ಯೇಕ ಸರ್ವೆ ಮಾಡಿ ಕೆಡಿಟಿ ಮತ್ತು ಪಿಟಿ ಶೀಟ್ ತಯಾರಿಸಿ ಹದ್ದುಬಸ್ತ್ ಮಾಡಿಕೊಟ್ಟಿದ್ದರೆ ರೈತರಿಗೆ ಈಗ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರ ಮಂಜೂರು ಮಾಡಿದ ಜಮೀನುಗಳಲ್ಲಿ ಸರ್ವೆ ಮಾಡಿ, ಯಾವ ಯಾವ ಕ್ಷೇತ್ರದ ರೈತರು ಎಷ್ಟೆಷ್ಟು ಸಾಗುವಳಿ ಕ್ಷೇತ್ರದಲ್ಲಿದ್ದಾರೋ ಅದನ್ನೇ ಪರಿಗಣಿಸಿ ಶೀಟ್ ತಯಾರಿಸಿ, ಉತಾರ ನೀಡಬೇಕೆನ್ನುವ ಆದೇಶ ನೀಡಿದೆ. ಈ ನೀತಿ ಸರಿಯಲ್ಲ. 1978ರಲ್ಲಿ ಮಂಜೂರಾದ ಜಮೀನುಗಳಲ್ಲಿ ವಹಿವಾಟು ಕ್ಷೇತ್ರದಲ್ಲಿ 5 ಗುಂಟೆ, 10 ಗುಂಟೆ, 20 ಗುಂಟೆ ಕ್ಷೇತ್ರ ವ್ಯತ್ಯಾಸಗಳಾಗಿವೆ. ಆದ್ದರಿಂದ ಮಂಜೂರಾತಿ ಜಮೀನುಗಳಿಗೆ ಯಾವುದೇ ಕ್ಷೇತ್ರ ವ್ಯತ್ಯಾಸ ಮಾಡದೆ ಸರ್ಕಾರದ ಆದೇಶದ ಹಕ್ಕುಪತ್ರದಂತೆ ಅವರವರ ಕ್ಷೇತ್ರವನ್ನು ಕಾಯಂ ಇಟ್ಟು, ಸರ್ವೆ ನಂಬರುಗಳಲ್ಲಿ ವ್ಯತ್ಯಾಸವಾದ ಹೆಚ್ಚುವರಿ ಕ್ಷೇತ್ರವನ್ನು ಕಡಿಮೆ ಮಾಡಿ, ಕಡಿಮೆ ಇರುವ ಕ್ಷೇತ್ರಕ್ಕೆ ಹೊಂದಿಸಿ, ಪುನಃ ಸರ್ವೆ ಮಾಡಿ ಕೆಡಿಟಿ ಮತ್ತು ಪಿಟಿ ಶೀಟ್ ತಯಾರಿಸಿ ವೈಜ್ಞಾನಿಕ ಉತಾರ ಪೂರೈಸಬೇಕು ಎಂದು ಆಗ್ರಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.