ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ಕಪ್ಪುಚುಕ್ಕೆ ತರುವ ಹುನ್ನಾರ ನಡೆಯುತ್ತಿದೆ ಎಂಬ ಬೇಸರವನ್ನು ತಾಲೂಕಿನ ಧರ್ಮ ರಕ್ಷಣಾ ವೇದಿಕೆ ವ್ಯಕ್ತಪಡಿಸಿ ಆಗಸ್ಟ್ ೧೬ ಶನಿವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ.ಪಟ್ಟಣದ ಗಣಪತಿ ಪೆಂಡಾಲ್ ನಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ಪ್ರಮುಖರ ಪೂರ್ವಭಾವಿ ಸಭೆ ನಡೆದು, ಧರ್ಮಸ್ಥಳ ಪವಿತ್ರ ಪುಣ್ಯಕ್ಷೇತ್ರ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಹೆಗ್ಗಡೆಯವರ ವಿರುದ್ಧ ನಡೆಯುತ್ತಿರುವ ಪಿತೂರಿಯ ಬಗ್ಗೆ ಹಲವಾರು ಮುಖಂಡರು ಒಮ್ಮತದಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ತಾಲೂಕು ಧರ್ಮ ರಕ್ಷಣಾ ವೇದಿಕೆ ಸಂಚಾಲಕ ಹಡೇನಹಳ್ಳಿ ಲೋಕೇಶ್ ಮಾತನಾಡಿ, ಧರ್ಮದ ಆಧಾರದ ಮೇಲೆ, ಜಾತಿಯ ಆಧಾರದ ಮೇಲೆ ಪ್ರಹಾರ ನಡೆಸಲಾಗುತ್ತಿದೆ, ಈ ವಿಚಾರದಲ್ಲಿ ರಾಜಕೀಯ ಪ್ರಯೋಗ ಬೇಡ, ನಾನು ಧರ್ಮಸ್ಥಳದ ಸದ್ಭಕ್ತನಾಗಿದ್ದೇನೆ, ಧರ್ಮಕ್ಕೆ ಅಪಮಾನವಾದರೆ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಇದು ನಮಗೆ ಶೋಭೆಯೂ ಅಲ್ಲ, ರಾಜ್ಯದ ಹಲವೆಡೆ ಬಡ ಹೆಣ್ಣು ಮಕ್ಕಳ ಮರ್ಯಾದೆ ಹರಾಜಾದಾಗ ಯಾರೂ ಧ್ವನಿಯಾಗಲಿಲ್ಲ, ದೇಶಕ್ಕೆ ಬಾಂಬ್ ಹಾಕಿದವರ ಬಗ್ಗೆ ಮಾತನಾಡುತ್ತಿಲ್ಲ, ಜನರ ಮೌನವನ್ನು ದೌರ್ಬಲ್ಯ ಎಂದು ಭಾವಿಸಬಾರದು. ಜನ ಸಂಘಟನೆಯಾಗಿ ಎದ್ದರೆ ದುಷ್ಟ ಶಕ್ತಿ ಉಳಿಯುವುದಿಲ್ಲ, ಗಿರೀಶ್ ಮಟ್ಟಣ್ಣವರ್ ಗೆ ಧರ್ಮಸ್ಥಳದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂಬ ಆಕ್ರೋಶದ ಮಾತುಗಳನ್ನಾಡಿದರು.ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಹಾಗೂ ಧರ್ಮ ರಕ್ಷಣಾ ವೇದಿಕೆ ಸಂಚಾಲಕ ಜಯರಾಮ್ ಮಾತನಾಡಿ, ನೂರಾರು ಹೆಣಗಳನ್ನು ಧರ್ಮಸ್ಥಳದಲ್ಲಿ ಹೂತಿದ್ದೇನೆ ಎಂದು ಹೇಳುವ ವ್ಯಕ್ತಿ ಮಾತು ನಂಬಿ ಎಲ್ಲವೂ ಹುಸಿಯಾಗಿದೆ, ಅದಕ್ಕೆ ಸಾಕ್ಷಿ ಇಲ್ಲವಾಗಿದೆ, ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವಿರುದ್ಧ ಅಪಪ್ರಚಾರ ನಡೆಯುತ್ತಿದ್ದು, ನಾವು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ, ಕಷ್ಟಕಾಲದಲ್ಲಿ ನಾವು ಸ್ಪಂದನೆ ನೀಡುತ್ತೇವೆ. ಹಿಂದೂ ಧರ್ಮವನ್ನು ಹಾಳು ಮಾಡಲು ದೊಡ್ಡ ಪಿತೂರಿ ನಡೆಯುತ್ತಿದೆ, ಹಿಂದೂ ಧರ್ಮದ ಮೇಲೆ ಈ ರೀತಿ ಪ್ರಹಾರ ಏಕೆ ಮಾಡುತ್ತಿದ್ದೀರಿ, ನಾವೆಲ್ಲ ಸಂಘಟನೆಯಾಗಿ ಆಗಸ್ಟ್ ೧೬ರಂದು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ತಾಲೂಕು ಧರ್ಮ ಜಾಗೃತಿ ವೇದಿಕೆ ಅಧ್ಯಕ್ಷ, ಪರಿಸರ ಪ್ರೇಮಿ ಸಿ. ಎನ್. ಅಶೋಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದುಗಳ ಶ್ರದ್ಧಾ ಕೇಂದ್ರ ಧರ್ಮಸ್ಥಳವಾಗಿದೆ, ಪಿತೂರಿ ನಡೆಸುತ್ತಿರುವ ಮಾತುಗಳಲ್ಲಿ ಹುರುಳಿಲ್ಲ, ಆಪಾದನೆಗಳಿಗೆ ಬೆಲೆ ಇಲ್ಲವಾಗಿದೆ, ನಾವು ತನಿಖೆಗೆ ವಿರೋಧ ಮಾಡುತ್ತಿಲ್ಲ, ಆದರೆ ಅವಹೇಳನವನ್ನು ಸಹಿಸಲಾಗದು ಎಂದರು.ಮುಖಂಡರಾದ ಮನೋಹರ್ ಗಜಾನನ, ರೈತ ಮುಖಂಡ ಹಾಗೂ ಧರ್ಮ ರಕ್ಷಣಾ ವೇದಿಕೆ ಸಂಚಾಲಕ ಅರಳಾಪುರ ಮಂಜಣ್ಣ, ಜಾನಪದ ಕಲಾವಿದ ಹಾಗೂ ಸಂಚಾಲಕ ಶವಣೇರಿ ನಿಂಗಪ್ಪ, ಬಿಜೆಪಿ ಮುಖಂಡ ಹಾಗೂ ಸಮಿತಿಯ ಸಂಚಾಲಕ ಗಿರೀಶ್, ಜಗದೀಶ್ ಕೆರೆಬೀದಿ, ಜಯರಾಮ್ ಮಾರೇನಹಳ್ಳಿ, ಮಂಜುನಾಥ್, ಸಮಾಜ ಸೇವಕ ಹಾಗೂ ಸಮಿತಿಯ ಸಂಚಾಲಕ ಕುಮಾರ್ ಮಾತನಾಡಿದರು.
ತಾಲೂಕಿನ ವಿವಿಧ ಸಂಘಟನೆಗಳ ಪ್ರಮುಖರಾದ ಸಿ. ವೈ. ಸತ್ಯನಾರಾಯಣ್, ವೆಂಕಟರಮಣ, ವಿಶ್ವನಾಥ್, ಜಗದೀಶ್, ಬ್ರಿಗೇಡ್ ವೆಂಕಟೇಶ್, ಹಿಂದೂ ಸಂಘಟನೆಗಳ ಪ್ರಮುಖರು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದರು.ಆಗಸ್ಟ್ ೧೬ರಂದು ಬೃಹತ್ ಸಂಖ್ಯೆಯಲ್ಲಿ ಧರ್ಮಸ್ಥಳ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ವಿರುದ್ಧ ನಡೆಯುತ್ತಿರುವ ಪಿತೂರಿ ವಿರುದ್ಧ ಪ್ರತಿಭಟನೆ ಪಟ್ಟಣದ ೪೦ ಅಡಿ ಆಂಜನೇಯ ದೇವಾಲಯದ ಎದುರಿನಿಂದ ಆರಂಭವಾಗಲಿದೆ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಘೋಷಣೆ ಯುಕ್ತ ಪ್ರತಿಭಟನೆ ನಡೆದು ತಾಲೂಕು ದಂಡಾಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದೆಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ.