ಎಸಿ ಕಚೇರಿ ಮುಂದೆ ಹಾಕಲಾಗಿರುವ ‘ನ್ಯಾಯಾಲಯ’ ಎಂಬ ನಾಮಫಲಕವನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಸಾರ್ವಜನಿಕರ ಸಮಸ್ಯೆಗಳಿಗೆ ನ್ಯಾಯಯುತವಾಗಿ ಸ್ಪಂದನೆ ಸಿಗದಿರುವ ಪರಿಸ್ಥಿತಿಯಲ್ಲಿ ಇಂತಹ ಫಲಕ ಇರುವುದು ನ್ಯಾಯಾಂಗ ವ್ಯವಸ್ಥೆಗೆ ಅವಮಾನ ಮಾಡಿದಂತಾಗಿದೆ. ಕಳೆದ ಒಂದು ವರ್ಷದಿಂದ ಖಾತೆ ಬದಲಾವಣೆ ಮಾಡಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡುತ್ತಲೇ ಬಂದಿದ್ದಾರೆ. ಆದರೆ ಇತ್ತೀಚೆಗೆ ಪ್ರಕರಣದ ದಾಖಲೆಗಳಲ್ಲಿಯೇ ಬದಲಾವಣೆ ಮಾಡಿ ಗೊಂದಲ ಸೃಷ್ಟಿಸಿದ್ದಾರೆ. ಸಾರ್ವಜನಿಕರು ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾಮಾನ್ಯ ರೈತರ ಕೆಲಸಗಳಿಗೆ ವಿಳಂಬ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ರೈತರ ಜಮೀನುಗಳ ಖಾತೆ ಬದಲಾವಣೆ ಪ್ರಕ್ರಿಯೆಯಲ್ಲಿ ಉಂಟಾಗಿರುವ ವಿಳಂಬ ಹಾಗೂ ಆಡಳಿತಾತ್ಮಕ ನಿರ್ಲಕ್ಷ್ಯವನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಮತ್ತು ಪದಾಧಿಕಾರಿಗಳು ಹಾಸನ ಉಪವಿಭಾಗಾಧಿಕಾರಿ (ಎಸಿ) ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಏಕವಚನದಲ್ಲೆ ಆಕ್ರೋಶ ವ್ಯಕ್ತಪಡಿಸಿ ವಾಗ್ದಾಳಿ ನಡೆಸಿದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಸಂಘದ ಮುಖಂಡ ಕಣಗಾಲ್ ಮೂರ್ತಿ ಹಾಗೂ ಹಾಸನ ತಾಲೂಕು ಅಧ್ಯಕ್ಷ ಮಂಡಳಿ ಮಂಜು ಬಿಟ್ಟಗೌಡನಹಳ್ಳಿ, ಎಸಿ ಕಚೇರಿ ಮುಂದೆ ಹಾಕಲಾಗಿರುವ ‘ನ್ಯಾಯಾಲಯ’ ಎಂಬ ನಾಮಫಲಕವನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಸಾರ್ವಜನಿಕರ ಸಮಸ್ಯೆಗಳಿಗೆ ನ್ಯಾಯಯುತವಾಗಿ ಸ್ಪಂದನೆ ಸಿಗದಿರುವ ಪರಿಸ್ಥಿತಿಯಲ್ಲಿ ಇಂತಹ ಫಲಕ ಇರುವುದು ನ್ಯಾಯಾಂಗ ವ್ಯವಸ್ಥೆಗೆ ಅವಮಾನ ಮಾಡಿದಂತಾಗಿದೆ. ಕಳೆದ ಒಂದು ವರ್ಷದಿಂದ ಖಾತೆ ಬದಲಾವಣೆ ಮಾಡಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡುತ್ತಲೇ ಬಂದಿದ್ದಾರೆ. ಆದರೆ ಇತ್ತೀಚೆಗೆ ಪ್ರಕರಣದ ದಾಖಲೆಗಳಲ್ಲಿಯೇ ಬದಲಾವಣೆ ಮಾಡಿ ಗೊಂದಲ ಸೃಷ್ಟಿಸಿದ್ದಾರೆ. ಸಾರ್ವಜನಿಕರು ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾಮಾನ್ಯ ರೈತರ ಕೆಲಸಗಳಿಗೆ ವಿಳಂಬ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ತಾಲೂಕಿನ ಬಿಟ್ಟಗೌಡನಹಳ್ಳಿಯ ನಿವಾಸಿ ಹನುಮಂತೇಗೌಡ ಅವರ ಪಿತ್ರಾರ್ಜಿತ ಜಮೀನಿಗೆ ಸಂಬಂಧಿಸಿದಂತೆ ಇನಾಂ ವಿಶೇಷ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ೧೯೯೬ರ ಫೆಬ್ರವರಿ ೧೯ರಂದು ಕೃಷ್ಣೇಗೌಡ ಅವರಿಗೆ ಮಂಜೂರಾಗಿದ್ದ ಜಮೀನು ಹಲವು ವರ್ಷಗಳಿಂದ ಕುಟುಂಬದ ಸ್ವಾಧೀನ ಹಾಗೂ ಅನುಭವದಲ್ಲಿದೆ. ನಂತರ ಕೃಷ್ಣೇಗೌಡ ಅವರ ಹೆಸರಿಂದ ಹನುಮಂತೇಗೌಡ ಅವರ ಹೆಸರಿಗೆ ಖಾತೆಯೂ ಆಗಿದೆ ಎಂದು ತಿಳಿಸಿದರು. ಇತ್ತೀಚೆಗೆ ಕುಟುಂಬದ ಸದಸ್ಯರಿಗೆ ಪಾಲು ನೀಡುವ ಉದ್ದೇಶದಿಂದ ಸರ್ವೆ ಸ್ಕೆಚ್ ಮಾಡಿಸಲು ಅರ್ಜಿ ಸಲ್ಲಿಸಲಾಗಿತ್ತು. ಸ್ಥಳ ಪರಿಶೀಲನೆ ನಡೆಸಿದ ಸರ್ವೆ ಇಲಾಖೆ ಅಧಿಕಾರಿಗಳು ಸರ್ವೆ ಸಂಖ್ಯೆ ೮೫ ಬದಲಿಗೆ ೮೩ರಲ್ಲಿ ಸ್ವಾಧೀನ ಅನುಭವ ಇದೆ ಎಂದು ವರದಿ ನೀಡಿದ್ದರು. ಅದರಂತೆ ಸರ್ವೆ ಸಂಖ್ಯೆ ೮೩ಕ್ಕೆ ಖಾತೆ ಬದಲಾವಣೆ ಮಾಡಿಕೊಡಲು ಹಾಸನ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು. ೨೦೨೪ರಲ್ಲೇ ಆದೇಶ ಹೊರಬಿದ್ದಿದ್ದರೂ ಇಂದಿನವರೆಗೂ ಖಾತೆ ಬದಲಾವಣೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂದು ದೂರಿದರು. ಸಾರ್ವಜನಿಕರು ಕಚೇರಿಗೆ ಬಂದರೆ ಅವರ ಕೆಲಸಗಳು ನಡೆಯುವುದಿಲ್ಲ. ಆದರೆ ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ಸಂಬಂಧಿಸಿದವರು ಬಂದರೆ ಮಾತ್ರ ತ್ವರಿತವಾಗಿ ಕೆಲಸ ಆಗುತ್ತದೆ ಎಂಬ ಭಾವನೆ ಜನರಲ್ಲಿ ಮೂಡಿದೆ ಎಂದು ಅವರು ಆರೋಪಿಸಿದರು. ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಅಧಿಕಾರಿಗಳು ಯಾವುದೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ದೂರಿದ ಅವರು, ಗಣಿಗಾರಿಕೆ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳು ಪರಸ್ಪರ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿದರು. ಖಾತೆ ಬದಲಾವಣೆ ಸೇರಿದಂತೆ ನ್ಯಾಯಯುತ ಬೇಡಿಕೆಗಳು ಈಡೇರುವವರೆಗೆ ಎಸಿ ಕಚೇರಿ ಎದುರಿನ ಹೋರಾಟವನ್ನು ಮುಂದುವರಿಸಲಾಗುವುದು ಎಂದು ರೈತ ಸಂಘದ ಮುಖಂಡರು ಘೋಷಿಸಿದರು. ಜೂನ್ ತಿಂಗಳೊಳಗೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯದಿದ್ದರೆ ರೈತ ಸಂಘದ ನೇತೃತ್ವದಲ್ಲಿ ರಸ್ತೆ ತಡೆ ಸೇರಿದಂತೆ ಉಗ್ರ ಹೋರಾಟಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ನಂತರ ಎಷ್ಟೋ ಹೊತ್ತು ಆದ ಮೇಲೆ ಉಪವಿಭಾಗಾಧಿಕಾರಿಗಳು ಪ್ರತಿಭಟನೆ ಬಳಿ ಬಂದು ಸಮಸ್ಯೆ ಆಲಿಸಿದರು. ನಂತರ ಜೂನ್ ೩೧ಕ್ಕೆ ಸ್ಥಳಕ್ಕೆ ಬರಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನಾನಿರತ ರೈತರು ತಮ್ಮ ಹೋರಾಟವನ್ನು ಮೊಟಕುಗೊಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.