ನೀರಿನ ಸಮಸ್ಯೆ: ಜಿಲ್ಲಾಧಿಕಾರಿ ಮನೆ ಮುಂದೆ ಪ್ರತಿಭಟನೆ

KannadaprabhaNewsNetwork |  
Published : May 17, 2024, 12:34 AM IST
16ಕೆಪಿಆರ್‌ಸಿಆರ್‌ 02:  | Kannada Prabha

ಸಾರಾಂಶ

ರಾಯಚೂರು ನಗರಸಭೆ ವ್ಯಾಪ್ತಿಯ ವಾರ್ಡ್‌ ನಂ.16 ತಿಮ್ಮಾಪುರಪೇಟೆ ಬಡಾವಣೆಯ ಮಹಿಳೆಯರು, ನಿವಾಸಿಗಳು ಖಾಲಿಕೊಡಗಳನ್ನು ಪ್ರದರ್ಶಿಸಿ ಡಿಸಿ ಮನೆ ಮುಂದೆ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ನಗರಸಭೆ ವ್ಯಾಪ್ತಿಯ ವಾರ್ಡ್‌ ನಂ.16 ತಿಮ್ಮಾಪುರ ಪೇಟೆ ಬಡಾವಣೆಗೆ ನೀರಿನ ಸಮಸ್ಯೆಗೆ ಪರಿಹಾರ ನೀಡಬೇಕು. ಸಮರ್ಪಕ ನೀರು ಸರಬರಾಜು ಮಾಡಬೇಕು ಹಾಗೂ ಅಗತ್ಯ ಮೂಲಭೂತ ಸವಲತ್ತುಗಳನ್ನು ಕಲ್ಪಿಸಲು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ನಿವಾಸಿಗಳು ಜಿಲ್ಲಾಧಿಕಾರಿ ಮನೆ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

ಸ್ಥಳೀಯ ಬಸವೇಶ್ವರ ವೃತ್ತದ ಬಳಿ ಸೇರಿದ ಬಡಾವಣೆ ಮಹಿಳೆಯರು, ಪುರುಷರು ಹಾಗೂ ಮಕ್ಕಳು ಖಾಲಿ ಕೊಡಗಳನ್ನಿಡಿದು ಜಿಲ್ಲಾಧಿಕಾರಿ ಬಂಗಲೆ ವರೆಗೂ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು ನಂತರ ಡಿಸಿ ಮನೆ ಮುಂದೆ ಕುಳಿತು ತಮ್ಮ ಅಳಲನ್ನು ತೋಡಿಕೊಂಡು ಅಧಿಕಾರಿಗೆ ಮನವಿ ಸಲ್ಲಿಸಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.ನಗರಸಭೆ ವ್ಯಾಪ್ತಿಯ ಪ್ರಮುಖ ಬಡಾವಣೆಗಳಲ್ಲೊಂದಾದ ತಿಮ್ಮಾಪುರ ಪೇಟೆಗೆ ಕಳೆದ ಒಂದು ವರ್ಷದಿಂದ ಸರಿಯಾಗಿ ನೀರು ಸರಬರಾಜು ಮಾಡುತ್ತಿಲ್ಲ. ಎರಡು ದಿನಕ್ಕೊಮ್ಮೆ ರಾತ್ರಿ 2 ಅಥವಾ 3 ಗಂಟೆಗೆ ನೀರು ಬಿಡಲಾಗುತ್ತಿದೆ. ಕೇವಲ ಒಂದು ತಾಸು ನೀರು ಬರುತ್ತಿದೆ. ಇದರಿಂದ ಎಲ್ಲರಿಗೂ ನೀರು ಸಿಗುತ್ತಿಲ್ಲ. ನೀರಿಗಾಗಿ ರಾತ್ರಿ ನಿದ್ದೆ ಮಾಡದೆ ನೀರು ತುಂಬುವ ಕಾಯಕವಾಗಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬಡಾವಣೆ ನಿವಾಸಿಗಳು ನಗರಸಭೆಗೆ ನೀರಿನ ಕರವನ್ನು ಕಟ್ಟುತ್ತಿದ್ದಾರೆ. ಹಲವಾರು ದಿನಗಳಿಂದ ಸರಿಯಾಗಿ ನೀರು ಬಿಡುತ್ತಿಲ್ಲ. ಕೃಷ್ಣಾ ನದಿಯಲ್ಲಿ ನೀರಿನ ಲಭ್ಯತೆಯಿದ್ದರು ನಗರಸಭೆ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಇತ್ತೀಚೆಗೆ ಕಲುಷಿತ ನೀರನ್ನು ಬಿಡುತ್ತಿದ್ದು ಜನರು ರೋಗ-ರುಜಿನಗಳಿಗೆ ತುತ್ತಾಗುತ್ತಿದ್ದಾರೆ ಎಂದು ದೂರಿದರು.

ತಿಮ್ಮಾಪೂರುಪೇಟೆಯಲ್ಲಿ ಬೋರ್‌ವೆಲ್ ಇಲ್ಲ. ಗೃಹ ಬಳಕೆಗೆ ಉಪಯೋಗಿಸಲು ನೀರು ಸಿಗುತ್ತಿಲ್ಲ. ನೀರಿಗಾಗಿ ಬಡಾವಣೆಗಳಿಗೆ ಅಲೆದಾಡಬೇಕಿದೆ. ಕೂಡಲೇ ಜಿಲ್ಲಾಧಿಕಾರಿಯವರು ಬಡಾವಣೆಗೆ ಭೇಟಿ ನೀಡಿ ನಗರಸಭೆ ಅಧಿಕಾರಿಗಳಿಗೆ ಸಮಸ್ಯೆ ಪರಿಹಾರಕ್ಕೆ ಸೂಚನೆ ನೀಡಬೇಕು. ಇಷ್ಟೇ ಅಲ್ಲದೇ ಬಡಾವಣೆಗೆ ಅಗತ್ಯ ಸವಲತ್ತುಗಳನ್ನು ಕಲ್ಪಿಸಿಕೊಡಲು ಕ್ರಮವಹಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಡಾವಣೆಯ ಮುಖಂಡರು, ಯುವಕರು, ಮಹಿಳೆಯರು, ಮಕ್ಕಳು ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ